

ಮೈಸೂರು: ಜಿಲ್ಲೆಯಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ 1,45,908 ಮತದಾರರನ್ನು ಕಾರಣವಿಲ್ಲದೆ ಕೈಬಿಡಲಾಗಿದೆ. ಇದು ಅಕ್ಷಮ್ಯ ಲೋಪ ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಆರೋಪಿಸಿದರು.
ನಗರ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಬೆಂಗಳೂರಿನ ಮಾದರಿಯಲ್ಲಿಯೇ ಮೈಸೂರಿನಲ್ಲಿಯೂ ಮತದಾರರ ಪಟ್ಟಿಗೆ ಕನ್ನ ಹಾಕಲಾಗಿದೆ. ಮತದಾರರ ಪಟ್ಟಿಯಿಂದ ಹೆಸರು ಕೈ ಬಿಡಬೇಕಾದರೆ ಕಾರಣ ನೀಡಬೇಕು. ವರ್ಗಾವಣೆ, ನಿಧನ, ಡಬಲ್ ಎಂಟ್ರಿಯಾಗಿದ್ದರೆ ತೆಗೆಯಲಾಗುತ್ತದೆ. ಕಾರಣವನ್ನೇ ನೀಡದೆ ಮತದಾರರ ಪಟ್ಟಿಯಿಂದ ಹೆಸರು ಕೈ ಬಿಡಲಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಪವಿತ್ರ ಕಾರ್ಯ ಎಂದು ಬೇಸರಿಸಿದರು.
ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿವೆ. ಚಾಮರಾಜ 16,242, ನರಸಿಂಹರಾಜ 18007, ವರುಣ 11,987, ನರಸಿಂಹರಾಜ 12,367, ಚಾಮರಾಜ 17,847, ಕೆ.ಆರ್. ನಗರ 10,604, ಹುಣಸೂರು 10,220, ಪಿರಿಯಾಪಟ್ಟಣ 8,570, ನಂಜನಗೂಡು ಕ್ಷೇತ್ರದಲ್ಲಿ 11,724 ಮತದಾರರನ್ನು ಪಟ್ಟಿಯಿಂದ ತೆಗೆದಿದ್ದಾರೆ. ಚುನಾವಣೆಯನ್ನು ಗೆಲ್ಲುವುದಕೋಸ್ಕರ ಬಿಜೆಪಿಯವರು ಏನನ್ನು ಮಾಡಲಿಕ್ಕೂ ಸಿದ್ಧರಿದ್ದಾರೆ. ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಪರೀಕ್ಷಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.