

ಶಿವಮೊಗ್ಗ: ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಸ್ವತಃ ಭ್ರಷ್ಟರಾದ ಬಿಜೆಪಿಯವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವುದು ನಾಚಿಕೆಗೇಡಿತನ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಲೇವಡಿ ಮಾಡಿದರು.
ಬೆಂಗಳೂರಿನಲ್ಲಿ ಕೆಲವು ಗುತ್ತಿಗೆದಾರರ ಮೇಲೆ ಐಟಿ ದಾಳಿ ಆಗಿದೆ. ಇದಕ್ಕೂ ಕಾಂಗ್ರೆಸ್ಸಿಗೂ ಯಾವ ಸಂಬಂಧವೂ ಇಲ್ಲ. ಆದರೂ ಬಿಜೆಪಿ ನಾಯಕರು ಅರ್ಥವಿಲ್ಲದಂತೆ ಬಾಯಿಗೆ ಬಂದಂತೆ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಆರೋಪ ಮಾಡುವವರೆಲ್ಲರೂ ಭ್ರಷ್ಟಾಚಾರಿಗಳೇ ಆಗಿದ್ದಾರೆ. ಜೈಲಿಗೂ ಹೋಗಿ ಬಂದಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರದ ಹಗರಣಗಳು ಸಾಲುಸಾಲಾಗಿ ಬಂದಿವೆ. ಶೇ.40ರ ಕಮಿಷನ್ ಹಗರಣ, ಪಿಎಸ್‌ಐ ನೇಮಕಾತಿ ಹಗರಣ, ಬಿಟ್‌ಕಾಯಿನ್ ಹಗರಣ ಸೇರಿ ಸಾಕಷ್ಟು ಹಗರಣಗಳಾಗಿವೆ. ಅದರಲ್ಲೂ ಕರೊನಾ ಸಂದರ್ಭದಲ್ಲಂತೂ ಬಿಜೆಪಿಗರು ಹಣ ಕೊಳ್ಳೆ ಹೊಡೆದಿದ್ದಾರೆ. ಅಂತಹ ಭ್ರಷ್ಟಾಚಾರಿಗಳು ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಐದು ತಿಂಗಳಾಗಿಲ್ಲ. ಆಗಲೇ ಆರೋಪದ ಮಾತನಾಡುತ್ತಾರೆ. ಯಾರೇ ಭ್ರಷ್ಟಾಚಾರ ಮಾಡಿದರೂ ತನಿಖೆ ಮಾಡಿ ಕ್ರಮ ಕೈಗೊಳ್ಳಲಿ ಎಂದರು.
ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಪ್ರಮುಖರಾದ ಚಂದ್ರಶೇಖರ್, ಕಲಗೋಡು ರತ್ನಾಕರ್, ಕಾಶಿ ವಿಶ್ವನಾಥ್, ಕಲೀಂ ಪಾಶಾ ಸುದ್ದಿಗೋಷ್ಠಿಯಲ್ಲಿದ್ದರು.