

ವಿಜಯಪುರ : ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ ಎಂಬಂತೆ ಗುರುವಿಗೆ ಶ್ರೇಷ್ಠ ಸ್ಥಾನವಿದ್ದು, ನಮಗೆ ವಿದ್ಯೆ ಕಲಿಸಿದ ಗುರುಗಳನ್ನು ಇಂದು ನೆನೆಯುತ್ತಿರುವುದು ಅತ್ಯಂತ ಶ್ರೇಷ್ಠ ಕಾರ್ಯ ಎಂದು ಆಟ್ ಆಫ್ ಲೀವಿಂಗ್ನ ಡಾ. ಬಿ.ಎಂ. ಪಾಟೀಲ ಗುರೂಜಿ ಹೇಳಿದರು.
ನಗರದ ಹೊರ ವಲಯದ ಹಿಟ್ಟಿನಹಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳು ಪದವಿ ಪೂರೈಸಿದ 25 ವರ್ಷಗಳ ರಜತ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೀಲನ ಹಾಗೂ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನ್ಮ ನೀಡಿದ ತಂದೆ&ತಾಯಿ ಹಾಗೂ ವಿದ್ಯೆ ಕಲಿಸಿದ ಗುರುಗಳಿಗೆ ಸಮಾಜದಲ್ಲಿ ಉನ್ನತ ಸ್ಥಾನವಿದೆ. ಸದ್ಯ ಸಮಾಜದಲ್ಲಿ ತಾವು ಉನ್ನತ ಸ್ಥಾನದಲ್ಲಿದ್ದರೂ ಕೂಡಾ ತಾವು ಕಲಿತ ಕಾಲೇಜಿಗೆ ಹಾಗೂ ಕಲಿಸಿದ ಗುರುಗಳಿಗೆ ಗೌರವ ಸನ್ಮಾನ ಮಾಡುತ್ತಿರುವುದು ತಮ್ಮ ಸಂಸ್ಕಾರ ಎತ್ತಿ ತೋರಿಸುತ್ತದೆ ಎಂದರು.
ಮಹಾವಿದ್ಯಾಲಯದ ಹಳೇಯ ವಿದ್ಯಾರ್ಥಿಗಳಾದ ಡಾ. ಸುರೇಶ ಪಾಟೀಲ, ಡಾ. ಕೆ.ಎಚ್. ಮುಂಬಾರೆಡ್ಡಿ, ಡಾ. ರವೀಂದ್ರ ಬೆಳ್ಳಿ ಹಾಗೂ ಹಳೆಯ ವಿದ್ಯಾರ್ಥಿ ಸಂದ ಅಧ್ಯಕ್ಷ ಡಾ. ರಾಮನಗೌಡ ಕನ್ನೋಳ್ಳಿ ಮಾತನಾಡಿದರು. ಕೃಷಿ ಇಲಾಖೆ ನಿರ್ದೇಶಕ ಡಾ. ವೆಂಕಟರಮಣರೆಡ್ಡಿ ಪಾಟೀಲ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ. ಪ್ರಕಾಶ ಚವ್ಹಾಣ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕರಾದ ಡಾ. ಎಚ್.ಬಿ. ಪಾಟೀಲ, ಎಸ್.ಬಿ. ದೇವರನಾವದಗಿ, ಎಸ್.ಐ. ತೋಳನೂರ, ಆರ್.ಎ. ಬಾಳಿಕಾಯಿ, ಎಸ್.ವಿ. ನಾಡಗೌಡ, ಅಶೋಕ ಸಜ್ಜನ, ಆರ್.ವಿ. ಪಾಟೀಲ, ರಾಜೇಂದ್ರ ಪೋದ್ದಾರ, ಎಸ್.ಎ. ಗದ್ದನಕೇರಿ, ಜಗದೀಶ ಹೊಸಮಠ, ಎಸ್. ಚಂದ್ರಶೇಖರ, ರಾಜು ತೆಗ್ಗಿಹಳ್ಳಿ, ಪಾದಪೂಜೆ ಮಾಡುವ ಮೂಲಕ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಹಳೆಯ ವಿದ್ಯಾರ್ಥಿಗಳಾದ ಬಸವಂತ ಚವಾಣ, ಗುರುಪ್ರಸಾದ, ಶಿವು ಭಾವಿಕಟ್ಟಿ, ಹೇಮಂತಕುಮಾರ, ರವಿಕುಮಾರ ಮತ್ತಿತರರಿದ್ದರು. ಡಾ. ಎಂ.ಆರ್. ಮೈದರಗಿ ನಿರೂಪಿಸಿದರು. ಡಾ. ಲಿಂಗರಾಜ ತಾಳಿಕೋಟಿ ವಂದಿಸಿದರು.