

ಹುಬ್ಬಳ್ಳಿ: ಯಾರು ಲೋಕಸಭೆ ಚುನಾವಣಾ ಕಣಕ್ಕೆ ಧುಮುಕುತ್ತಾರೆ ಎಂದು ಹೇಳಲು ಬರುವುದಿಲ್ಲ. ಚುನಾವಣೆ ಘೊಷಣೆ ನಂತರ ಎಲ್ಲ ಪ್ರಕ್ರಿಯೆಗಳು ನಡೆಯುತ್ತವೆ. ಪ್ರತಿ ಚುನಾವಣೆಯಲ್ಲೂ ಬದಲಾವಣೆ ಸಹಜ. ಬಿಜೆಪಿಯ ರಣತಂತ್ರವೂ ಹೌದು. ಅಂದರೆ ಈಗಿರುವ ಸಂಸದರಲ್ಲಿ ಕೆಲವರು ಬದಲಾವಣೆ ಆಗಲಿದ್ದಾರೆ ಎಂಬ ಅರ್ಥವಲ್ಲ. ಪಕ್ಷದ ವೇದಿಕೆಯಲ್ಲಿ ಎಲ್ಲ ವಿಚಾರಗಳ ಚರ್ಚೆ ನಡೆಯಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹಾಲಿ 12 ಸಂಸದರಿಗೆ ಟಿಕೆಟ್ ತಪ್ಪಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೆಲ್ಲವೂ ಸುಳ್ಳು ಎಂದರು.
ರಾಜ್ಯ ವಿಧಾನಸಭಾ ಚುನಾವಣೆ ಸೋಲಿನ ಕುರಿತು ಪರಾಮರ್ಶೆ ಮಾಡಿದ್ದೇವೆ. ಕಾಂಗ್ರೆಸ್ಗೆ 135 ಸೀಟು ಬರಲು ಜನರಿಗೆ ಟೋಪಿ ಹಾಕಿದ್ದು ಕಾರಣ. ಕಾಂಗ್ರೆಸ್ನವರು ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ತರಲು ಹೊರಟಿದ್ದಾರೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು ಎನ್ನುವ ದುರುದ್ದೇಶದಿಂದ ಆಶ್ವಾಸನೆ ನೀಡಿದ್ದಾರೆ. ಕಾಂಗ್ರೆಸ್ನ ಎಟಿಎಂನಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ. ಜನರಿಗೆ ಈಗಾಗಲೇ ಕಾಂಗ್ರೆಸ್ನವರ ಗ್ಯಾರಂಟಿ ಏನೆಂಬುದು ಅರ್ಥವಾಗಿ ಪಶ್ಚಾತ್ತಾಪ ಪಡುತ್ತಿದ್ದಾರೆ. ಇನ್ನೆರಡು ತಿಂಗಳಲ್ಲಿ ಕಾಂಗ್ರೆಸ್ನ ಬಣ್ಣ ಬಯಲಾಗಲಿದೆ ಎಂದು ಕಿಡಿಯಾದರು.
ಬಿಜೆಪಿ ಉದ್ಯಮಿಗಳ ಸಾಲ ಮನ್ನಾ ಮಾಡಲಾಗಿದೆ ಎಂಬುದೆಲ್ಲ ಸುಳ್ಳು. ಸಾಲ ಮನ್ನಾ ಮಾಡಿದ್ದರ ದಾಖಲೆಗಳಿದ್ದರೆ ಕೊಡಲಿ. ಪ್ರಧಾನಿ ಮೋದಿ ಅವರು ಪ್ರತಿಯೊಬ್ಬರಿಗೂ 15 ಲಕ್ಷ ರೂ. ಕೊಡುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಹಾಗೇನಾದರೂ ವಿಡಿಯೋ ದಾಖಲೆ ಇದ್ದರೆ ನಮ್ಮ ಮುಂದಿಡಲಿ. ನಾವು ಸಿದ್ದರಾಮಯ್ಯ ಅವರು ನೀಡಿರುವ ಆಶ್ವಾಸನೆಗಳ ಕುರಿತು ವಿಡಿಯೋ ಕೊಟ್ಟಿದ್ದೇವೆ ಎಂದರು.
ನನ್ನ ಯೋಗ್ಯತೆಗೆ ತಕ್ಕಂತೆ ಪ್ರಧಾನ ಮಂತ್ರಿ ಮೋದಿ ಮತ್ತು ನನ್ನ ಪಕ್ಷ ನನಗೆ ಸ್ಥಾನಮಾನ ಕೊಟ್ಟಿದೆ. ನಾನು ಅಪೇಕ್ಷೆ ಪಡದೇ ಇದ್ದರೂ ಪಕ್ಷ ಸದಾ ಒಂದಿಲ್ಲೊಂದು ಜವಾಬ್ದಾರಿ ನನಗೆ ಕೊಟ್ಟಿದೆ. ಲಿಂಗಾಯತರಿಗೆ ಸೂಕ್ತ ಸ್ಥಾನಮಾನ ಕೊಟ್ಟಿಲ್ಲ ಎನ್ನುವುದು ಸರಿಯಲ್ಲ ಎಂದು ಖೂಬಾ ಹೇಳಿದರು.