

ರಂಗ ತಂಡವನ್ನು ಕಟ್ಟಿ ಆರು ದಶಕಗಳ ಕಾಲ ಮುಂದುವರಿಸಿರುವುದು ಶ್ರೇಷ್ಠ ಸಂಗತಿಯಾಗಿದೆ ಎಂದು ಹಿರಿಯ ರಂಗಕರ್ಮಿ ಮೈಮ್ ರಮೇಶ್ ಹೇಳಿದರು.
ನಗರದ ರಂಗಾಯಣದ ಶ್ರೀರಂಗದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕದಂಬ ರಂಗ ವೇದಿಕೆಯ ಆರು ದಶಕಗಳ ಸಾರ್ಥಕ ರಂಗಯಾತ್ರೆ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿ ಮಾತನಾಡಿ, ಮೈಸೂರಿನ ಕದಂಬ ರಂಗವೇದಿಕೆ ಎಂದರೆ ಸಾಕು ರಾಜಶೇಖರ ಕದಂಬ ಅವರನ್ನು ಗುರುತಿಸುತ್ತಾರೆ ಎಂದು ತಿಳಿಸಿದರು.
ಯಾವುದೇ ಒಳ್ಳೆಯದನ್ನು ಕಟ್ಟುವುದು ಕಷ್ಟ. ಆದರೆ, ಮುರಿಯುವುದು ಬಹಳ ಸುಲಭ. ಆದರೆ, ಕದಂಬ ಅವರಂತಹ ವ್ಯಕ್ತಿಗಳು ಸಿಗುವುದು ಕಷ್ಟ. ಸದಾ ರಂಗ ಕಲಾವಿದರನ್ನು ಬೆನ್ನು ತಟ್ಟುತ್ತ, ರಂಗಭೂಮಿಗೆ ಸೇವೆ ಸಲ್ಲಿಸುತ್ತಿದ್ದಾರೆ. ರಂಗಭೂಮಿ ಬಗ್ಗೆ ಸದಾ ಚಡಪಡಿಸುತ್ತಾರೆ. ರಂಗಭೂಮಿ ಬಗ್ಗೆ ಕದಂಬ ಅವರಲ್ಲಿರುವ ಅರ್ಪಣಾ ಭಾವವನ್ನು ಯುವಕರು ಕಲಿಯಬೇಕು ಎಂದು ಸಲಹೆ ನೀಡಿದರು.
ರಂಗಕರ್ಮಿಗಳಾದ ಧನಂಜಯ ಮತ್ತು ಡಿ.ಮಧು ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಅಧ್ಯಕ್ಷ ಎಚ್.ಎಸ್.ಸುರೇಶ್‌ಬಾಬು, ರಂಗವಲ್ಲಿ ತಂಡದ ಎಚ್.ಆರ್.ರವಿಪ್ರಸಾದ್, ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್ ಇದ್ದರು.