ಕನ್ನಡ ನಾಡಿನಲ್ಲಿ ಜನಿಸುವುದೇ ಪುಣ್ಯ

Published on

ಬಳ್ಳಾರಿ : ಶ್ರೀಮಂತ ಸಂಸ್ಕೃತಿ, ಮನಸೂರೆಗೊಳ್ಳುವ ಕಲೆ, ಭೌಗೋಳಿಕ ವಿಶೇಷತೆ ಹಾಗೂ ವೈವಿಧ್ಯತೆಯಿಂದ ಕೂಡಿದ ಕನ್ನಡ ನಾಡಿನಲ್ಲಿ ಜನಿಸುವುದೇ ಪುಣ್ಯ ಎಂದು ಬೆಂಳೂರು ವಿವಿ ಉಪಕುಲಪತಿ ಡಾ. ಎಸ್. ಎಂ. ಜಯಕರ ಹೇಳಿದರು.

ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸುವರ್ಣ ಕರ್ನಾಟಕ ಸಂಭ್ರಮ-ಕರ್ನಾಟಕ ರಾಜ್ಯೋತ್ಸವ-69 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದ ಪ್ರದೇಶಗಳಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗದಲ್ಲಿ ಪ್ರಾದೇಶಿಕವಾರು ಮಾತನಾಡುವ ಭಾಷೆ ಶೈಲಿ, ಆಚಾರ-ವಿಚಾರ, ಉಡುಗೆ-ತೊಡುಗೆ ಬದಲಾವಣೆಗೊಳ್ಳುತ್ತದೆ. ಎಲ್ಲೇ ಇದ್ದರೂ ನಾವಾಡೋ ಮಾತು, ಉಸಿರಾಡೋ ಗಾಳಿ, ನಮ್ಮ ನಡೆ-ನುಡಿಯಲ್ಲೂ ಕನ್ನಡತವನ್ನು ಮೈಗೂಡಿಸಿಕೊಂಡು ವೈವಿಧ್ಯತೆಯಲ್ಲೂ ಏಕತೆಯನ್ನು ಎತ್ತಿಹಿಡಿಯಬೇಕು ಎಂದು ಆಶಯ ವ್ಯಕ್ತಪಡಿಸಿದರು. ಕನ್ನಡ ನಾಡಿನ ಜನರು ಇತರೆ ಭಾಗಗಳಿಗೆ ಹೋದರೂ ಕನ್ನಡವನ್ನು ಸಂಭ್ರಮಿಸುವ ಗುಣ ಹೊಂದಿದ್ದಾರೆ. ಐತಿಹಾಸಿಕ ಹಿನ್ನೆಲೆ ಹೊಂದಿದ ಕನ್ನಡ ಸಂಸ್ಕೃತಿಯನ್ನು ಉನ್ನತ ಮಟ್ಟಕ್ಕೆ ಬೆಳೆಸುವಲ್ಲಿ ಕನ್ನಡಾಭಿಮಾನಿಗಳು ಶ್ರಮಿಸಬೇಕು ಎಂದು ತಿಳಿಸಿದರು.

ನಾಡಿನ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ಕನ್ನಡ ಭಾಷೆಗೆ ಅವಿರತ ಇತಿಹಾಸವಿದೆ. ಅನೇಕ ಶಾಸನ, ಸಾಹಿತ್ಯ, ವಚನ, ಕೃತಿ, ಲೇಖನಗಳನ್ನು ಕೊಡುಗೆ ನೀಡುವಲ್ಲಿ ಕನ್ನಡ ಮೇರುಸ್ಥಾನ ಹೊಂದಿದ್ದು, ಕನ್ನಡದ ಇತಿಹಾಸವನ್ನು ಅರಿತು ಗೌರವಿಸಬೇಕು.

ಕನ್ನಡವನ್ನು ಕಟ್ಟಿ ಬೆಳೆಸಲು ಶ್ರಮಿಸಿದ ಆದಿಕವಿ ಪಂಪ, ಕುಮಾರವ್ಯಾಸ, ಬಸವಣ್ಣ, ಅಲ್ಲಮಪ್ರಭು, ಪುರಂದರ ದಾಸ, ಕನಕದಾಸ, ಕುವೆಂಪು, ದ.ರಾ.ಬೇಂದ್ರೆ, ಸೇರಿದಂತೆ ಕನ್ನಡ ಭಾಷೆ-ಸಾಹಿತ್ಯ ಏಳಿಗೆಗೆ ಕೊಡುಗೆ ನೀಡಿದ ಅನೇಕ ಮಹನೀಯರನ್ನು ಸ್ಮರಿಸಬೇಕಿರುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ ಎಂದು ಹೇಳಿದರು.

ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ಪ್ರತಿ ವಿದ್ಯಾರ್ಥಿಯು ಸಂಸ್ಕಾರ ಹೊಂದಿರುತ್ತಾರೆ. ವಿವಿಯಲ್ಲಿ ಶೀಘ್ರವೇ ಕನ್ನಡ ಅಧ್ಯಯನ ವಿಭಾಗಕ್ಕೆ ಪೂರ್ಣಕಾಲಿಕ ಅಧ್ಯಾಪಕರುಗಳ ನೇಮಕಕ್ಕೆ ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಿದರು.

ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿದರು.

ಸಂಭ್ರಮ-ಸಡಗರದ ಮೆರವಣಿಗೆ: ಕರ್ನಾಟಕ ರಾಜ್ಯೋತ್ಸವ-69 ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ ಅದ್ದೂರಿ ಮೆರವಣಿಗೆಯು ತಾಯಿ ಭುವನೇಶ್ವರಿಯ ರಥದೊಂದಿಗೆ ಕುಂಭ ಹೊತ್ತ ಮಹಿಳೆಯ ಸಮ್ಮುಖದಲ್ಲಿ ವಿವಿಧ ಕಲಾತಂಡಗಳ ವಾದ್ಯಗಳ ಮೂಲಕ ರಾಜ್ಯದ 31 ಜಿಲ್ಲೆಗಳ ಸಂಸ್ಕೃತಿ, ವಿಶೇಷತೆ ಒಳಗೊಂಡ ಮಾಹಿತಿ ಕೈಪಿಡಿಯ ಚಿತ್ರಣ ಹಿಡಿದು, ಬುಲೆಟ್ ಬೈಕ್‌ಗಳ ಕಲರವದಿಂದ ವಿವಿಯ ಆವರಣದಲ್ಲಿ ಸಾಗಿಬಂದ ಮೆರವಣಿಗೆಯು ಸಂಭ್ರಮ-ಸಡಗರಕ್ಕೆ ಸಾಕ್ಷಿಯಾಯಿತು. ವಿವಿಧ ಕಲಾ ತಂಡಗಳಿಂದ ಜಾನಪದ ಕಲೆಗಳ ಪ್ರದರ್ಶನಕ್ಕೆ ಮೆರವಣಿಗೆಯು ಮೆರಗು ತಂದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net