

ಹುಬ್ಬಳ್ಳಿ: ಅಂಗನವಾಡಿ ಮಕ್ಕಳ ಹಾಗೂ ಬಾಣಂತಿಯರ ಅನ್ನಕ್ಕೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 32 ಜನರನ್ನು ಬಂಧಿಸಿದ್ದೇವೆ. ಮುಖ್ಯ ಆರೋಪಿಗಳನ್ನು ರಕ್ಷಣೆ ಮಾಡುವಷ್ಟು ನೈತಿಕ ಅಧೋಗತಿಗೆ ತಲುಪಿಲ್ಲ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸ್ಪಷ್ಟಪಡಿಸಿದರು.
ಧಾರವಾಡ ಜಿಲ್ಲಾ ಪತ್ರಕರ್ತರ ಸಂಘದಿಂದ ನಗರದ ಪತ್ರಿಕಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಕರಣಕ್ಕೆ ಸಂಬಂಧಿಸಿ ನಮ್ಮ ಮೇಲೆ (ಪೊಲೀಸರು) ಯಾರ ಒತ್ತಡವೂ ಇಲ್ಲ. ಎಲ್ಲರೂ ಪ್ರಮುಖ ಆರೋಪಿಗಳನ್ನು ಬಂಧಿಸಿ ಎಂದೇ ಹೇಳುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿದ್ದು, ಲುಕ್‌ಔಟ್ ನೋಟಿಸ್ ಕೂಡ ನೀಡಲಾಗಿದೆ. ಎಲ್ಲೇ ಇದ್ದರೂ ಅವರನ್ನು ಬಂಧಿಸಿ ತರುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.
ಆಯುಕ್ತಾಲಯ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಕಾವಲಿದೆ. ಇ-ಬೀಟ್ ಚುರುಕಿದೆ. ಚನ್ನಮ್ಮ ಪಡೆ ಕಾರ್ಯನಿರತವಾಗಿದೆ. ಹೊರವಲಯದಲ್ಲಿ ಚೆಕ್‌ಪೋಸ್ ತೆರೆದಿದ್ದು, 15 ಠಾಣೆ ವ್ಯಾಪ್ತಿಯಲ್ಲಿ ಬೀಟ್ ಕಾರ್ಯಕ್ಷಮತೆ ಹೆಚ್ಚಿಸಲಾಗಿದೆ. 112ಕ್ಕೆ ಕರೆ ಮಾಡಿದರೆ 5ನಿಮಿಷ್ಟ 12 ಸೆಕೆಂಡ್‌ಗಳಲ್ಲಿ ನಮ್ಮ ವೆಹಿಕಲ್ ಕರೆ ಮಾಡಿದ ಸ್ಥಳದಲ್ಲಿರುತ್ತಿದೆ. ಇದು ರಾಜ್ಯದಲ್ಲಿಯೇ ಅತಿ ಚುರುಕು ಪಡೆದಿದೆ ಎಂದು ವಿವರಿಸಿದರು.
ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಗೆ ಕಡಿವಾಣ ಹಾಕಲಾಗಿದೆ. ಆರಂಭದಲ್ಲಿಯೇ 2ಸಾವಿರ ಜನರನ್ನು ಹಿಡಿದು ಪರೀಕ್ಷೆಗೊಳಪಡಿಸಲಾಗಿತ್ತು. 850ಕ್ಕೂ ಹೆಚ್ಚು ಜನರು ಮಾದಕ ವ್ಯಸನಿಗಳಾಗಿರುವುದು ಕಂಡು ಬಂತು. ವ್ಯಸನಿಗಳ ಸಂಬಂಧಿಕರನ್ನು ಕರೆಯಿಸಿ ತಿಳಿ ಹೇಳಲಾಯಿತು. ಈ ಪ್ರಕ್ರಿಯೆ ಇಲ್ಲಿಗೇ ನಿಂತಿಲ್ಲ. ಇದು ಮುಂದುವರಿಯಲಿದೆ ಎಂದರು.
ಬಹುಭಾಷಿಕರು, ವಿವಿಧ ಸಮುದಾಯದವರು ಇಲ್ಲಿ ಇದ್ದಾರೆ. ರೈಲ್ವೆ, ವಿವಿಧ ವಾಹನಗಳು, ವಿಮಾನ ಸಂಪರ್ಕ ಇರುವುದರಿಂದ ಜನರು ಬಂದು ಹೋಗುವವರ ಸಂಖ್ಯೆ ಹೆಚ್ಚಿದೆ. ಅಪರಾಧ ಪ್ರಕರಣಕ್ಕೆ ಕಡಿವಾಣ ಹಾಕಿದ್ದೇವೆ ಎಂದಲ್ಲ, ಸಂಖ್ಯೆ ಕೊಂಚ ತಗ್ಗಿದೆ ಎಂಬುದು ಸಮಧಾನದ ಸಂಗತಿ. ಇನ್ನಷ್ಟು ಬಿಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಅವಳಿ ನಗರದಲ್ಲಿ 25 ರೌಡಿ ಗ್ರಾಂಗ್‌ಗಳಿವೆ. ಅಧೀನದ ರೌಡಿಗಳು ಅಪರಾಧ ಮಾಡಿದಾಗ ಪ್ರಮುಖ ಆರೋಪಿಯನ್ನು ಬಂಧಿಸಲಾಗುವುದಿಲ್ಲ. ಇದಕ್ಕೆ ಪೂರಕ ದಾಖಲೆಗಳು ಅಗತ್ಯವಾಗಿ ಬೇಕು. ಗಂಭೀರ ಪ್ರಕರಣದ ದಾಖಲೆ ಕೊಟ್ಟರೆ ಮುಖ್ಯ ಆರೋಪಿಗಳ ಬಂಧನ ಸುಲಭವಾಗಲಿದೆ. ಸಣ್ಣ, ದೊಡ್ಡ ಹಾಗೂ ಪ್ರಭಾವಿ ರೌಡಿ ಎಂದಿರುವುದಿಲ್ಲ. ರೌಡಿ ರೌಡಿನೇ ಎಂದು ವಿವರಿಸಿದರು.
ಆರೋಪಿಗಳನ್ನು ಬಂಧಿಸಿದ ವೇಳೆ ಅವರು ಸಡನ್ ಆಗಿ ಅಟ್ಯಾಕ್ ಮಾಡುತ್ತಾರೆ. ಅವರ ತಲೆಯಲ್ಲಿ ಇಲ್ಲಿಂದ ತಪ್ಪಿಸಿಕೊಳ್ಳುವ ಇರ‌್ಯಾದೆ ಇರುತ್ತದೆ. ಆಗ ಸಂಘರ್ಷವಾಗುತ್ತದೆ. ನಮ್ಮ ಸಿಬ್ಬಂದಿ ಸ್ವಯಂ ಸಂರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹೊಡೆಯುತ್ತಾರಷ್ಟೇ. ಸೈಬರ್ ಕ್ರೈಂಗಳ ಬಗೆಗೆ ಜನರು ಜಾಗೃತರಾಗಬೇಕು. ಯಾವುದೇ ಕರೆ ಅಥವಾ ಮೆಸೇಜ್ ಬಂದ ತಕ್ಷಣೆ ಅದಕ್ಕೆ ಮರುಳಾಗಬಾರದು ಎಂದು ಎಚ್ಚರಿಸಿದರು.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಲೋಚನೇಶ ಹೂಗಾರ, ಪ್ರಧಾನ ಕಾರ್ಯದರ್ಶಿ ಸುಶಿಲೇಂದ್ರ ಕುಂದರಗಿ, ಪತ್ರಕರ್ತ ಗಣಪತಿ ಗಂಗೊಳ್ಳಿ ಇತರರು ಇದ್ದರು.
ಸುಗಮ ಸಂಚಾರಕ್ಕೆ ವ್ಯವಸ್ಥೆ: ಸುಗಮ ಸಂಚಾರ ಸಾಧ್ಯವಾಗದಿರುವುದಕ್ಕೆ ನನಗೂ ಬೇಸರವಿದೆ. ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆದಿವೆ. ಸಿಗ್ನಲ್ ಲೈಟ್‌ಗಳ ಅಳವಡಿಕೆ ಹಾಗೂ ಸಿಸಿ ಕ್ಯಾಮರಾ ಜೋಡಣೆ ಕಾರ್ಯ ಪರಿಶೀಲಿಸಲಾಗುವುದು. ಐಐಟಿ, ಬಿವಿಬಿ ಹಾಗೂ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜ್‌ಗಳ ಸಹಯೋಗದಲ್ಲಿ ಪೂರಕ ನೀಲಿನಕ್ಷೆ ಸಿದ್ಧಪಡಿಸಲಾಗುವುದು. ಸರ್ಕಾರದಿಂದ ಅನುದಾನ ಪಡೆದು ಸುಗಮ ಸಂಚಾರಕ್ಕೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಎನ್. ಶಶಿಕುಮಾರ ವಿಶ್ವಾಸ ತುಂಬಿದರು.
ಕಂಡಕಂಡಲ್ಲಿ ವಾಹನ ಹಿಡಿದು ದಂಡ ಹಾಕಿ ಎಂದು ಟಾರ್ಗೆಟ್ ನೀಡಿಲ್ಲ. ಸಂಚಾರ ಸರಳೀಕರಣಕ್ಕೆ ನಮ್ಮ ಸಿಬ್ಬಂದಿ ಒತ್ತು ಕೊಡುತ್ತಿದ್ದಾರೆ. ಕೆಲವೆಡೆ ವಾಹನ ಸವಾರರು ಮೈ ಮರೆತಿರುತ್ತಾರೆ. ಈ ನಿಟ್ಟಿನಲ್ಲಿ ನಮ್ಮ ಪೊಲೀಸರು ದಂಡ ಹಾಕಿರುತ್ತಾರೆ. ಈ ಕುರಿತು ಇನ್ನಷ್ಟು ನಿಯಮ ಜಾರಿಗೆ ಸೂಚಿಸಲಾಗುವುದು ಎಂದರು.