10 ವರ್ಷಗಳಿಂದ ಕಾಟ ಕೊಡುತ್ತಿದ್ದಾರೆ

HKP
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮಹದಾಯಿ ವಿಚಾರವಾಗಿ ಕೇಂದ್ರ ಸರ್ಕಾರದವರು ಕಳೆದ 10 ವರ್ಷಗಳಿಂದ ರಾಜ್ಯಕ್ಕೆ ಕಾಟ ಕೊಡುತ್ತಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ನಡೆದ ಕೇಂದ್ರದ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಮಹದಾಯಿ ಯೋಜನೆಗೆ ಅನುಮತಿ ನೀಡುವ ವಿಷಯವಿತ್ತು. ಆದರೆ, ಅಂದು ಮಂಡಳಿಯು ಯಾವುದೇ ತೀರ್ಮಾನ ಕೈಗೊಳ್ಳದೇ ಈ ವಿಷಯವನ್ನು ಬಾಕಿ ಇಟ್ಟಿರುವುದು ಕರ್ನಾಟಕಕ್ಕೆ ಮಾಡಿರುವ ದೊಡ್ಡ ಅನ್ಯಾಯ ಎಂದು ಹೇಳಿದರು.

ಗೋವಾದ 400 ಕೆವಿ ವಿದ್ಯುತ್ ಮಾರ್ಗಕ್ಕೆ ಮಂಡಳಿ ಅನುಮತಿ ನೀಡುತ್ತದೆ. ಇದಕ್ಕೆ ಅನುಮೋದನೆ ನೀಡಬೇಕು ಎಂದು ಕೇಂದ್ರ ಸಚಿವರು ಪತ್ರಬರೆಯುತ್ತಾರೆ. ರಾಜ್ಯದ ಪ್ರಸ್ತಾವನೆಯನ್ನು ಮುಂದೂಡಲಾಗುತ್ತದೆ. ಕೇಂದ್ರ ಸರ್ಕಾರಕ್ಕೆ ಕರ್ನಾಟಕವೆಂದರೆ ತಾತ್ಸಾರ. ಗುರುವಾರ ಕರೆದ ಸಚಿವ ಸಂಪುಟ ಸಭೆಯಲ್ಲಿ ಮಹದಾಯಿ ವಿಚಾರವಾಗಿ ಸರ್ವಪಕ್ಷಗಳ ಸಭೆ ಕರೆಯಲು ನಿರ್ಧರಿಸಲಾಗಿದೆ. ಬಳಿಕ ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಾಗುವುದು ಎಂದು ತಿಳಿಸಿದರು.

ಕಾನೂನು ತಜ್ಞರ ಜತೆ ಚರ್ಚೆ ನಡೆಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡಿದ್ದೇವೆ. ಮಂಡಳಿಯಿಂದ ಕರ್ನಾಟಕಕ್ಕೆ ಆದ ಅನ್ಯಾಯ ಸಹಿಸಲ್ಲ ಎಂದರು.

ಕೋವೀಡ್ ಕಾಲಘಟ್ಟದಲ್ಲಿ ಆದ ಹಗರಣ ಕುರಿತು ನ್ಯಾ. ಜಾನ್ ಮೈಕಲ್ ಕುನ್ಹಾ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಅಧ್ಯಯನಕ್ಕಾಗಿ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ನೇತೃತ್ವದ ಸಮಿತಿ ರಚನೆ ಸಹ ಮಾಡಲಾಗುವುದು. ಸಮಿತಿ ವರದಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯಪಾಲರು ಒಟ್ಟು 11 ಮಸೂದೆಗಳನ್ನು ವಾಪಸ್ ಕಳುಹಿಸಿದ್ದರು. ಇದರಲ್ಲಿ 5 ಮಸೂದೆಗಳನ್ನು ಮರಳಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿದೆ. ಇನ್ನುಳಿದ 6 ಮಸೂದೆಗಳ ಕುರಿತು ರಾಜ್ಯಪಾಲರು ಕೇಳಿರುವ ಮಾಹಿತಿ ಕಲೆ ಹಾಕಲಾಗುತ್ತಿದೆ. ವಾರದೊಳಗೆ ಈ ಮಸೂದೆಗಳನ್ನು ಸಹ ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net