

ಬಸವನಬಾಗೇವಾಡಿ: ರಾಜ್ಯದ ಜನತೆಗೆ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸರ್ಕಾರಕ್ಕೆ ಎಷ್ಟೇ ಹೊರೆಯಾದರೂ ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದೆ ಎಂದು ಕಷಿ ಉತ್ಪನ್ನ ಮಾರುಕಟ್ಟೆ, ಜವಳಿ, ಸಕ್ಕರೆ ಅಭಿವದ್ಧಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಸೋಮವಾರ ಪಟ್ಟಣದ ವಿಜಯಪುರ ರಸ್ತೆ ಬಸವ ಭವನದಲ್ಲಿ ಪುರಸಭೆಯಿಂದ ಪೌರ ಸನ್ಮಾನ ಮತ್ತು ಕ್ಷೇತ್ರದ ನಾಗರಿಕರಿಂದ, ವಿವಿಧ ಸಂಘ ಸಂಸ್ಥೆ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯದ ಜನರು ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟು ಮತ ನೀಡಿದ್ದೀರಿ. ನಿಮ್ಮ ವಿಶ್ವಾಸಕ್ಕೆ ದ್ರೋಹವಾಗದ ರೀತಿಯಲ್ಲಿ ಜನರ ಹಿತ ಕಾಪಾಡುವ ಕೆಲಸವಾಗುತ್ತದೆ. ತಾವು ಕೊಟ್ಟ ಮತಗಳು ವ್ಯರ್ಥವಾಗಿಲ್ಲ. ಅದರಿಂದ ಸಮಾಜದ ಪರಿವರ್ತನೆಯಾಗಲಿದೆ. ರಾಜ್ಯದ ಜನತೆ ಹಾಗೂ ರೈತರು ಕಡುಬಡವರಿಗೆ ಅಗತ್ಯವಿರುವ ವಿವಿಧ ಮೂಲ ಸೌಲಭ್ಯಗಳನ್ನು ದೊರಕಿಸಿಕೊಡುವುದರ ಜೊತೆಗೆ ದೇಶದಲ್ಲೇ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಕಾಂಗ್ರೆಸ್ ಬದ್ಧವಾಗಿದೆ. ರಾಜ್ಯದ ಅಭಿವದ್ಧಿ ಜೊತೆಗೆ ಪಕ್ಷದ ಸಂಘಟನೆ ಮಾಡುವ ಮೂಲಕ, ನನಗೆ ನೀಡಿರುವ ಖಾತೆಗಳಿಗೆ ಹೊಸ ಸ್ಪರ್ಶ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಚುನಾವಣೆ ಸಂದರ್ಭದಲ್ಲಿ ಕೆಲವರು ನನ್ನ ಬಗ್ಗೆ ನಿಂದನೆಯ ಮಾತುಗಳನ್ನು ಆಡಿದ್ದರು. ಇನ್ನೂ ಕೆಲವರು ಪಕ್ಷದಲ್ಲೇ ಇದ್ದು ನನ್ನನ್ನು ಸೋಲಿಸಲು ಹೊಂಚು ಹಾಕಿದ್ದರು. ನಾನು ಮೊದಲೇ ಹೇಳಿದ್ದೆ, ಬಸವಣ್ಣನವರ ಕಪೆ, ಜನರ ಆಶಿರ್ವಾದ ಇರುವವರೆಗೆ ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಆ ಮಾತು ಕ್ಷೇತ್ರದ ಜನತೆ ನಿಜ ಮಾಡಿದ್ದೀರಿ. ಕ್ಷೇತ್ರದ ಜನರು ಮೌಢ್ಯತೆಗೆ ಮಾರು ಹೋಗದೆ ಅಭಿವದ್ಧಿಗೆ ಮತ ನೀಡುವ ಮೂಲಕ ನಮ್ಮದು ಏನಿದ್ದರೂ ಅಭಿವದ್ಧಿ ಒಂದೇ ಗುರಿ ಎನ್ನುವುದು ಮತಗಳ ಮೂಲಕ ಸಾಕ್ಷಿಯಾಗಿದೆ. ಕ್ಷೇತ್ರದ ಜನತೆ ಪರಿವರ್ತನೆಯಾಗಿದ್ದಾರೆ. ಇನ್ನು ಮುಂದೆ ನಿಮ್ಮ ಬಣ್ಣದ ಮಾತಿಗೆ ಮಾರು ಹೋಗುವ ಕಾಲ ಮುಗಿಯಿತು ಎಂದರು.
ಬಸವನಬಾಗೇವಾಡಿ ಮತಕ್ಷೇತ್ರ ರಾಜ್ಯದಲ್ಲೇ ಒಂದು ಆಕರ್ಷಣೆ ಕೇಂದ್ರವನ್ನಾಗಿ ಹೊರ ಹೊಮ್ಮುವುದರಲ್ಲಿ ಎರಡು ಮಾತಿಲ್ಲ. ಕ್ಷೇತ್ರದ ಜನತೆ ಹಾಗೂ ವಿವಿಧ ಮಠಾಧೀಶರ ಆಸೆಯಂತೆ ಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ, ದ್ರಾಕ್ಷಿ ಕೋಲ್ಡ್ ಸ್ಟೋರೇಜ್, ಕ್ಷೇತ್ರದ ಸಂಪೂರ್ಣ ನೀರಾವರಿ ಸೇರಿದಂತೆ ಕ್ಷೇತ್ರದ ಜನತೆಗೆ ಅಗತ್ಯವಿರುವ ಅನೇಕ ಅಭಿವದ್ಧಿ ಕಾರ್ಯಗಳು ಹಂತ ಹಂತವಾಗಿ ಮಾಡುವ ಮೂಲಕ ನಿಮ್ಮ ಋಣವನ್ನು ತೀರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಇಂಗಳೇಶ್ವರ ವಚನ ಶಿಲಾಮಂಟಪದ ಚನ್ನಬಸವ ಶ್ರೀಗಳು ಮಾತನಾಡಿ, ಶಿವಾನಂದ ಪಾಟೀಲವರ ಜನಪರ ಕಾರ್ಯಗಳು ಅವರ ಹ್ಯಾಟ್ರಿಕ್ ಗೆಲುವಿಗೆ ಶ್ರೀರಕ್ಷೆ ಮತ್ತು ಸಚಿವ ಸ್ಥಾನ ದೊರಕಲು ಸಹಕಾರವಾಗಿದೆ ಎಂದು ಹೇಳಿದರು.
ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಮಾತನಾಡಿ, ಪ್ರತಿವರ್ಷ ರಾಷ್ಟ್ರೀಯ ಬಸವ ಉತ್ಸವ, ಪ್ರತ್ಯಕ ಪ್ರಾಧಿಕಾರ ಸೇರಿದಂತೆ ಅಣ್ಣನ ಕ್ಷೇತ್ರಕ್ಕೆ ಅಗತ್ಯವಿರುವ ಮೂಲಸೌಲಭ್ಯಗಳನ್ನು ಸಚಿವರಿಂದ ಇನ್ನಷ್ಟು ಕೆಲಸ ಕಾರ್ಯಗಳು ನಡೆಯಲಿ ಎಂದು ಹರಸಿದರು.
ಕಾರ್ಯಕ್ರಮಕ್ಕೂ ಮುನ್ನ ಡಾ. ಬಿ.ಆರ್. ಅಂಬೇಡ್ಕರ್ ವತ್ತದಿಂದ ತೆರೆದ ವಾಹನದಲ್ಲಿ ಗ್ರಾಮೀಣ ಭಾಗದ ವಿವಿಧ ಸೊಗಡಿನ ವಾಧ್ಯ, ವೈಭವದೊಂದಿಗೆ ಭವ್ಯ ಮೆರವಣಿಗೆ ಮೂಲಕ ಮೂಲ ನಂದೀಶ್ವರ ದೇವಸ್ಥಾನಕ್ಕೆ ತೆರಳಿ, ದೇವರ ದರ್ಶನ ಪಡೆಯಲಾಯಿತು.
ಇಟ್ಟಗಿಯ ಗುರುಶಾಂತ ವೀರ ಶಿವಾಚಾರ್ಯ ಶ್ರೀಗಳು, ಹುಣಶ್ಯಾಳದ ಆನಂದ ದೇವರು ಉಪಸ್ಥಿತರಿದ್ದರು.
ಹಿರಿಯ ಸಾಹಿತಿ ಲ.ರು. ಗೊಳಸಂಗಿ, ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಎ.ಪಿ. ಪಾಟೀಲ, ಪ್ರೇಮು ಮ್ಯಾಗೇರಿ, ಶಿವನಗೌಡ ಬಿರಾದಾರ, ಸಂಗಮೇಶ ಓಲೇಕರ, ಸಂಜು ಕಲ್ಯಾಣಿ, ದೇವೇಂದ್ರ ಚವ್ಹಾಣ, ಬಸಣ್ಣ ದೇಸಾಯಿ, ಭಾಗ್ಯಶ್ರೀ ಪಾಟೀಲ, ಕಮಲಸಾಬ ಕೊರಬು, ರಾಹುಲ ಕುಬಕಡ್ಡಿ, ಚಂದ್ರಶೇಖರಗೌಡ ಪಾಟೀಲ, ರಮೇಶ ಸೂಳಿಬಾವಿ, ಬಸವರಾಜ ಹಾರಿವಾಳ, ರವಿ ರಾಠೋಡ, ಕಲ್ಲು ದೇಸಾಯಿ, ಸಂಗಮೇಶ ಬಳಗಾರ, ಬಸವರಾಜ ಗೊಳಸಂಗಿ, ಅಶೋಕ ಹಾರಿವಾಳ, ಕಲ್ಲು ಸೊನ್ನದ, ತಾನಾಜಿ ನಾಗರಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಿವಿಧ ಸಂಘ ಸಂಸ್ಥೆ ಹಾಗೂ ಬಸವನಬಾಗೇವಾಡಿ ಮತಕ್ಷೇತ್ರದ ನಾಗರಿಕರಿಂದ ಸನ್ಮಾನ ಕಾರ್ಯಕ್ರಮ ಜರುಗಿತು. ಶಂಕರಗೌಡ ಬಿರಾದಾರ ಸ್ವಾಗತಿಸಿದರು. ಶಿಕ್ಷಕ ಎಚ್.ಬಿ. ಬಾರಿಕಾಯಿ ಕಾರ್ಯಕ್ರಮ ನಿರೂಪಿಸಿದರು.
ಕೆಲವರು ಸಚಿವ ಸ್ಥಾನಕ್ಕಾಗಿ ಲಾಭಿ ಮಾಡಿದರು. ಇನ್ನೂ ಕೆಲವರು ದೆಹಲಿಗೆ ಹೋಗಿ ನನಗೆ ಸಚಿವ ಸ್ಥಾನ ನೀಡಬೇಡಿ ಎಂದು ಲಾಭಿ ಮಾಡಿದರು. ಆದರೂ ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸ ಇಟ್ಟು ಸಚಿವ ಸ್ಥಾನ ನೀಡಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿಯಾಗಿರುತ್ತೇನೆ.ಶಿವಾನಂದ ಪಾಟೀಲ, ನೂತನ ಸಚಿವರು.
ಜನಶಕ್ತಿಯೊಂದಿಗೆ ದೈವಶಕ್ತಿ ಇದ್ದಾಗ ಮಾತ್ರ ಮಹತ್ ಕಾರ್ಯಕೈಗೊಳ್ಳಲು ಸಾಧ್ಯ. ಅಧಿಕಾರಕ್ಕಾಗಿ ಎಷ್ಟೊ ಜನ ಲಾಭಿ ಮಾಡುವವರ ಮಧ್ಯೆ ಅಭಿವದ್ಧಿಯ ಮಂತ್ರದ ಮೇಲೆ ಸಚಿವ ಸ್ಥಾನ ಪಡೆದುಕೊಂಡ ವ್ಯಕ್ತಿ ಶಿವಾನಂದ ಪಾಟೀಲ ಅವರು ನಿರಂತರ ಯಶಸ್ಸು ಸಿಗಲಿಶಿವಪ್ರಕಾಶ ಶಿವಾಚಾರ್ಯ ಶ್ರೀಗಳು, ಹಿರೇಮಠ, ಬಸವನ ಬಾಗೇವಾಡಿ