ನೂರು ಎಫ್‌ಐಆರ್ ದಾಖಲಿಸಿದ್ರೂ ಹೆದರಲ್ಲ

EX DCM K S Eshwarappa
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ದೇಶದ್ರೋಹಿ ಹೇಳಿಕೆ ನೀಡಿರುವ ಸಂಸದ ಡಿ.ಕೆ.ಸುರೇಶ್ ಮತ್ತು ಅವರನ್ನು ಬೆಂಬಲಿಸಿದವರಿಗೆ ನೋಟಿಸ್ ನೀಡಿಲ್ಲ. ಆದರೆ ದೇಶ ವಿಭಜಿಸುವ ಹೇಳಿಕೆ ನೀಡುವವರನ್ನು ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಗೆ ತರಲು ಒತ್ತಾಯಿಸಿದ್ದಕ್ಕೆ ನನಗೆ ನೋಟಿಸ್ ಕೊಟ್ಟು ಎಫ್‌ಐಆರ್ ದಾಖಲಿಸಿದ್ದಾರೆ. ಇಂತಹ ನೂರು ನೋಟಿಸ್ ಕೊಟ್ಟರೂ ಅಥವಾ ಎಫ್‌ಐಆರ್‌ಗಳನ್ನು ದಾಖಲಿಸಿದರೂ ಹೆದರುವುದಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ಡಿ.ಕೆ.ಸುರೇಶ್ ಅವರನ್ನು ಗುಂಡಿಟ್ಟು ಕೊಲ್ಲಿ ಎಂದು ನಾನೆಲ್ಲೂ ಹೇಳಿಲ್ಲ. ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಗೆ ತರುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಡಿ.ಕೆ.ಸುರೇಶ್ ಅವರ ದೇಶ ವಿಭಜನೆ ಹೇಳಿಕೆಯನ್ನು ನಾನು ಈಗಲೂ ಖಂಡಿಸುತ್ತೇನೆ. ನನ್ನ ಹೇಳಿಕೆಗೆ ಈಗಲೂ ಬದ್ಧ. ಹಿಂದುತ್ವ, ರಾಷ್ಟ್ರವಾದಗಳ ಕುರಿತು ನೂರು ನೋಟಿಸ್ ಕೊಟ್ಟರೂ ಎದುರಿಸುತ್ತೇನೆ. ಇನ್ನೂ ಕಾಲ ಮಿಂಚಿಲ್ಲ. ರಾಜ್ಯ ಸರ್ಕಾರ ಸುರೇಶ್ ವಿರುದ್ಧ ಕೇಸ್ ಹಾಕಬೇಕು ಎಂದು ಆಗ್ರಹಿಸಿದರು.
ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ನ್ಯಾಯಾಲಯ ದಂಡ ಹಾಕಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಜಾಮೀನಿನ ಮೇಲೆ ಹೊರಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೂ ನ್ಯಾಯಾಲಯ 10 ಸಾವಿರ ರೂ. ದಂಡ ಹಾಕಿದೆ. ಇಂಥವರಿಗೆ ರಾಷ್ಟ್ರಭಕ್ತಿಯನ್ನು ಹಂಚುವ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಕಿಡಿಕಾರಿದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಕೆ.ವಿ.ಅಣ್ಣಪ್ಪ, ಹೃಷಿಕೇಶ್ ಪೈ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net