

ಹುಬ್ಬಳ್ಳಿ: ರಾಜ್ಯದಲ್ಲಿ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಪತ್ತೆಯಾದ ಹಣ ಯಾರಿಗೆ ಸೇರಿದ್ದು ಎಂಬುದನ್ನು ಇಲಾಖೆಯಿಂದಲೇ ಬಹಿರಂಗ ಪಡಿಸಿ ಎಂದು ಶಾಸಕ ಜಗದೀಶ ಶೆಟ್ಟರ್, ಬಿಜೆಪಿಗೆ ಸವಾಲು ಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಯಾರದ್ದು ಎಂದು ಐಟಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ? ಐಟಿ ಇಲಾಖೆ ನಿಮ್ಮ ನಿಯಂತ್ರಣದಲ್ಲಿಯೇ ಇದೆ. ಸಾಧ್ಯವಾದರೆ ಬಹಿರಂಗ ಪಡಿಸಿ. ಪಂಚ ರಾಜ್ಯ ಹಾಗೂ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ಸಿಗರು ಸಾವಿರ ಕೋಟಿ ರೂ. ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂದು ಆರೋಪ ಮಾಡಿರುವುದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಶೋಭೆ ತರುವಂಥದಲ್ಲ ಎಂದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಹಳಷ್ಟು ಐಟಿ ದಾಳಿ ಆಗಿವೆ. ಇದು ನಾಲ್ಕು ದಿನ ಸುದ್ದಿಯಾಗುತ್ತದೆ. ಮುಂದೆ ಏನು ಎಂಬುದು ಗೊತ್ತಾಗುವುದಿಲ್ಲ. ಯಾರಿಗೆ ದಂಡ ಹಾಕಿದ್ದೀರಿ? ಯಾರ ಮೇಲೆ ಕ್ರಮ ಕೈಗೊಂಡಿದ್ದೀರಿ ? ಎಂಬುದನ್ನು ಬಹಿರಂಗ ಪಡಿಸಲಿ. ಚುನಾವಣೆ ವ್ಯವಸ್ಥೆ, ರಾಜಕೀಯ ಹದಗೆಟ್ಟು ಹೋಗಿದೆ. ನೀವು (ಬಿಜೆಪಿ) ಚುನಾವಣೆಯಲ್ಲಿ ಹಣ ಖರ್ಚು ಮಾಡುವುದಿಲ್ಲವಾ? ನೀವೇನು ನೂರಕ್ಕೆ ನೂರರಷ್ಟು ಸತ್ಯ ಹರಿಶ್ಚಂದ್ರರಾ ಎಂದು ಪ್ರಶ್ನಿಸಿದರು.
ಬಿಜೆಪಿಯನ್ನು ಜನ ತಿರಸ್ಕಾರ ಮಾಡಿ ಮನೆಗೆ ಕಳುಹಿಸಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಹಾಗೂ ಪ್ರತಿಭಟನೆ ಮಾಡಲು ಅವರಿಗೆ ನೈತಿಕತೆ ಇಲ್ಲ. ಪಕ್ಷಕ್ಕೆ ರಾಜ್ಯಾಧ್ಯಕ್ಷ ಇಲ್ಲ. ವಿಪಕ್ಷ ನಾಯಕ ಇಲ್ಲ. ಯಾರ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತೀರಿ? ಎಸ್ಕಾಂಗಳು ಬಿಜೆಪಿ ಸರ್ಕಾರದಲ್ಲೂ ಲಾಭದಲ್ಲಿ ಇರಲಿಲ್ಲ. ಮಳೆಯಾಗದ ಕಾರಣ ವಿದ್ಯುತ್ ಅಭಾವ ಸಹಜ. ಬೇರೆ ಮಾರ್ಗದಿಂದ ರಾಜ್ಯ ಸರ್ಕಾರ ವಿದ್ಯುತ್ ಖರೀದಿ ಮಾಡಲಿದೆ ಎಂದು ಹೇಳಿದರು.