ಕೊಡಗು ಅಭಿವೃದ್ಧಿಗೆ ಅವಶ್ಯವಿದೆ ಐಟಿ-ಬಿಟಿ

IT-BT
Published on

ಮಡಿಕೇರಿ:

ಕಾಫಿ ಬೆಳೆ ಕೊಡಗಿನ ಪ್ರಮುಖ ಆರ್ಥಿಕತೆಯ ಮೂಲವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮವೂ ಬೆಳವಣಿಗೆ ಸಾಧಿಸುತ್ತಿದ್ದು, ಈ ಮೂಲಕವೂ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಲು ಕಾರಣವಾಗಿದೆ. ಇದರ ಜತೆಗೆ ಏಲಕ್ಕಿ, ಜೇನು, ಕರಿಮೆಣಸು, ಅಡಕೆ ಸೇರಿದಂತೆ ಇತರ ಮೂಲಗಳಿಂದಲೂ ಇಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗವಕಾಶ ಗಿಟ್ಟಿಸಿಕೊಂಡು ಬದಕು ಕಟ್ಟಿಕೊಂಡವರಿದ್ದಾರೆ.

ಶೈಕ್ಷಣಿಕ ಕ್ರಾಂತಿಯ ನಂತರ ಕೊಡಗಿನವರೂ ಉನ್ನತ ವಿದ್ಯಾಭ್ಯಾಸ ಪಡೆದುಕೊಳ್ಳುತ್ತಿದ್ದಾರೆ. ಸ್ಥಳೀಯವಾಗಿ ಕೊಡಗು ವಿಶ್ವವಿದ್ಯಾಲಯ, ಒಂದು ಸರ್ಕಾರಿ ಮತ್ತು ಒಂದು ಖಾಸಗಿ ಎಂಜಿನಿಯರಿAಗ್ ಕಾಲೇಜು, ಮೆಡಿಕಲ್ ಕಾಲೇಜು, ದಂತ ವೈದ್ಯಕೀಯ ಕಾಲೇಜು ಹೀಗೆ ಉನ್ನತ ಶಿಕ್ಷಣ ಸಂಸ್ಥೆಗಳು ವರ್ಷಂಪ್ರತಿ ಸಮಾಜಕ್ಕೆ ವಿದ್ಯಾವಂತರನ್ನು ಕೊಡುವ ಕೆಲಸ ಮಾಡುತ್ತಿದೆ. ಹೊರಜಿಲ್ಲೆ, ರಾಜ್ಯ, ವಿದೇಶದಲ್ಲೂ ಉನ್ನತ ಶಿಕ್ಷಣ ಪಡೆದುಕೊಳ್ಳುವ ಸ್ಥಳೀಯರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ.

ಆದರೆ ಐಟಿ-ಬಿಟಿಯಂಥ ತಾಂತ್ರಿಕ ಉದ್ಯೋಗವಕಾಶ ಕೊಡಗಿನಲ್ಲಿ ಇಲ್ಲ. ಹಾಗಾಗಿ ಉದ್ಯೋಗಕ್ಕಾಗಿ ತವರು ಬಿಟ್ಟು ತೆರಳುವ ಅನಿವಾರ್ಯತೆ ಇಲ್ಲಿಯ ವಿದ್ಯಾವಂತರದ್ದು. ಈ ನಿಟ್ಟಿನಲ್ಲಿ ಕೊಡಗಿನಲ್ಲಿ ಕೂಡ ಐಟಿ-ಬಿಟಿ ಉದ್ಯೋಗವಕಾಶಗಳು ಲಭಿಸುವಂತಾಗುವ ಸಲುವಾಗಿ ಸ್ಥಳೀಯವಾಗಿ ಐಟಿ-ಬಿಟಿ ಕ್ಷೇತ್ರ ವಿಸ್ತರಣೆ ಆಗಬೇಕು ಎನ್ನುವ ಬೇಡಿಕೆ ಬಹಳ ಹಿಂದಿನಿAದಲೂ ಇದೆ. 'ಬಿಯಾಂಡ್ ಬೆಂಗಳೂರು' ಪರಿಕಲ್ಪನೆಗೆ ಅನುಗುಣವಾಗಿ ಕೊಡಗಿನಲ್ಲಿ ಅವಕಾಶಗಳು ಮಾಡಿಕೊಟ್ಟರೆ ಐಟಿ-ಬಿಟಿ ಸಂಸ್ಥೆಗಳ ಸ್ಥಾಪನೆ ಕಷ್ಟವೇನಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಕೊಡಗಿನಲ್ಲಿ ಐಟಿ-ಬಿಟಿ ಸಂಸ್ಥೆಗಳು ಆರಂಭವಾದರೆ ಸ್ಥಳೀಯ ಪ್ರತಿಭಾವಂತರಿಗೆ ಇಲ್ಲಿಯೇ ಉದ್ಯೋಗವಕಾಶ ಸಿಗುವುದಲ್ಲದೆ ಜಿಲ್ಲೆಯ ಆರ್ಥಿಕತೆ ಸುಧಾರಿಸಲು ಮತ್ತೊಂದು ದಾರಿಯೂ ಲಭ್ಯ ಆದಂತಾಗುತ್ತದೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಔದ್ಯೋಗೀಕರಣವೆಂಬುದು ಆರ್ಥಿಕತೆಯ ಭದ್ರ ಅಡಿಪಾಯವಾಗಿರುವ ಈ ಕಾಲಘಟ್ಟದಲ್ಲಿ ಕೊಡಗಿನ ಬಹುಪಾಲು ಯುವ ಜನಾಂಗ ಸಹಜವಾಗಿ ಐಟಿ ಬಿಟಿ ಕಂಪನಿಗಳಲ್ಲಿರುವ ಉದ್ಯೋಗವಕಾಶಗಳತ್ತ ಆಕರ್ಷಿತರಾಗುತ್ತಿದ್ದಾರೆ. ಈ ಬೆಳವಣಿಗೆಗಳು ಕೊಡಗಿನಲ್ಲಿಯೇ ಆದಲ್ಲಿ ಖಂಡಿತವಾಗಿಯೂ ನಮ್ಮ ಪ್ರತಿಭೆಗಳು ಇಲ್ಲಿಯೇ ನೆಲೆ ನಿಂತು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವ ಜತೆಗೆ ಸ್ಥಳೀಯ ಪ್ರಾತಿನಿಧ್ಯಕ್ಕೂ ಒತ್ತು ನೀಡುವಲ್ಲಿ ಪೂರಕ ವಾತಾವರಣ ಸೃಷ್ಟಿಯಾಗಲಿದೆ. ಈಗಾಗಲೇ ಪ್ರವಾಸೋದ್ಯಮದಲ್ಲಿಯೂ ತನ್ನದೇ ಛಾಪನ್ನು ಮೂಡಿಸಿರುವ ಕೊಡಗು ಐಟಿ ಬಿಟಿ ಕಂಪನಿಗಳ ಮೂಲಕ ಉದ್ಯೋಗಾವಕಾಶದ ಸೌಲಭ್ಯವನ್ನು ಪಡೆದುಕೊಂಡು ತಾಂತ್ರಿಕ ಕ್ಷೇತ್ರದಲ್ಲಿಯೂ ಪ್ರಗತಿ ಕಾಣುವ ಭರವಸೆ ನೆರವೇರಬಹುದಾಗಿದೆ.

ಪ್ರತಿಮಾ ಹರೀಶ್ ರೈ, ಲೇಖಕಿ, ಮಡಿಕೇರಿ

ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಶೈಕ್ಷಣಿಕವಾಗಿಯೂ ಮುಂದಿರುವ ಕೊಡಗಿನಲ್ಲಿ ಐಟಿ ಬಿಟಿ ಸಂಸ್ಥೆಗಳನ್ನು ಆರಂಭಿಸುವುದಕ್ಕೆ ಸರ್ಕಾರ ಪೂರಕ ವ್ಯವಸ್ಥೆಯನ್ನು ಮಾಡಿಕೊಟ್ಟಲ್ಲಿ ಕೊಡಗಿಗೆ ಇನ್ನೊಂದು ಗರಿ ಮೂಡಿದಂತಾಗುತ್ತದೆ. ಜತೆಗೆ ಜಿಲ್ಲೆಯ ಆರ್ಥಿಕ ಬಲವರ್ಧನೆಗೆ ಕೂಡ ಸಹಕಾರಿಯಾಗುತ್ತದೆ. ಜಿಲ್ಲೆಯ ಪ್ರತಿಭಾವಂತರಿಗೆ ಸ್ಥಳೀಯ ಕಂಪೆನಿಗಳಲ್ಲೇ ಉದ್ಯೋಗವಕಾಶಗಳು ದೊರಕುವುದರಿಂದ ಕುಟುಂಬ ಸದಸ್ಯರನ್ನು ಬಿಟ್ಟು ದೂರದ ಮಹಾನಗರದೊಳಗೆ ಇಷ್ಟವಿಲ್ಲದಿದ್ದರೂ ಬದುಕು ಸವೆಸುವುದು ತಪ್ಪುತ್ತದೆ. ಕೊಡಗಿನಂಥ ಜಿಲ್ಲೆಗಳಲ್ಲೂ ಐಟಿ ಬಿಟಿ ಸಂಸ್ಥೆಗಳು ಶುರುವಾದಲ್ಲಿ ಬೆಂಗಳೂರಿನAಥ ನಗರಗಳು ಎದುರಿಸುತ್ತಿರುವ ಮೂಲಭೂತ ಸೌಕರ್ಯಗಳಾದ ನೀರು, ವಸತಿ, ನೈರ್ಮಲ್ಯ ಜತೆಗೆ ಟ್ರಾಫಿಕ್ ಮೊದಲಾದ ಸಮಸ್ಯೆಗಳ ಒತ್ತಡವೂ ಒಂದಷ್ಟು ಕಡಿಮೆಯಾಗಬಹುದು.

ಲೀಲಾಕುಮಾರಿ ತೊಡಿಕಾನ, ಕವಯತ್ರಿ, ಕುಶಾಲನಗರ

ಜಿಲ್ಲೆಯಲ್ಲಿ ಐಟಿ ಬಿಟಿ ಸಂಸ್ಥೆಗಳು ಆರಂಭವಾದಲ್ಲಿ ಸ್ಥಳೀಯ ಪ್ರತಿಭಾವಂತ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರಕುತ್ತದೆ. ಸರ್ಕಾರ ಇದಕ್ಕೆ ಪೂರಕ ವ್ಯವಸ್ಥೆ ಮಾಡಿಕೊಟ್ಟಲ್ಲಿ ಯುವ ಜನತೆ ನಮ್ಮ ನಾಡಿನಲ್ಲಿದ್ದುಕೊಂಡು ಇಲ್ಲಿನ ಸಂಸ್ಕೃತಿ ಆಚಾರ ವಿಚಾರಗಳ ಅರಿವು ಹೊಂದುತ್ತಾರೆ. ಕೊಡಗಿನ ಕೃಷಿ ಪದ್ಧತಿಯ ಕಡೆಗೂ ಆಸಕ್ತಿ ವಹಿಸುತ್ತಾರೆ. ಹಾಗೆಯೇ ಉತ್ತಮ ವಾತಾವರಣದಲ್ಲಿ ಆರ್ಥಿಕತೆ ಸದೃಢವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ಬಾಡನ ಡೈಸಿ ಲೋಕೇಶ್, ಕಡಿಯತ್ತೂರು ಗ್ರಾಮ

ಐಟಿ-ಬಿಟಿ ಸಂಸ್ಥೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಿ ಅವುಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸಿದರೆ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಠಿಯಾಗುತ್ತದೆ. ಪ್ರತಿಭಾವಂತರಿಗೆ ಅವಕಾಶ ಸಿಕ್ಕಿದಂತಾಗುತ್ತದೆ ಹಾಗೂ ಯುವಕ ಯುವತಿಯರು ಬೆಂಗಳೂರಿಗಿAತ ಕಡಿಮೆ ಸಂಬಳ ಬಂದರೂ ಸಹ ಅವರ ಜಿಲ್ಲೆಗಳಲ್ಲಿಯೇ ಇರುವ ಅವಕಾಶ ಸಿಗುತ್ತದೆ.

ನೋಫಲ್, ನೆಲ್ಯಹುದಿಕೇರಿ ನಿವಾಸಿ

ಕೊಡಗಿನಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ಇಲ್ಲದೇ ಬೇರೆ ಭಾಗದಲ್ಲಿ ಹೋಗಿ ಕೆಲಸ ನಿರ್ವಹಿಸುತ್ತಿರುವುದು ದುರಂತ. ಇಲ್ಲಿ ಐಟಿ - ಬಿಟಿ ಕಂಪನಿಗಳು ಪ್ರಾರಂಭವಾದರೆ ಇಲ್ಲಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಕೊಡಗು ಅಭಿವೃದ್ಧಿಗೂ ಒಂದು ದಾರಿ ಆದಂತಾಗುತ್ತದೆ. ಇನ್ನಾದರೂ ಎಚ್ಚೆತ್ತು ಸಂಬAಧ ಪಟ್ಟ ಸಚಿವರು ಹಾಗೂ ಶಾಸಕರು ಇದರ ಬಗ್ಗೆ ಗಮನ ಹರಿಸಲಿ. ಇಲ್ಲವಾದರೆ ಕೊಡಗು ಅಭಿವೃದ್ಧಿ ಆಗುವುದಿಲ್ಲ. ಇಲ್ಲಿಯ ಪ್ರತಿಭೆಗಳನ್ನು ಹೊರ ರಾಜ್ಯದಲ್ಲಿ ಬಳಕೆ ಮಾಡಿಕೊಳ್ಳುತ್ತಾರೆ.

ಉಮಾಶಂಕರ್, ಕೃಷಿಕ, ಸಿಡುಗಳಲೆ

ಕೊಡಗಿನಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿರುದ್ಯೋಗ ಸಮಸ್ಯೆ ಕಾಡದಂತೆ ಸರ್ಕಾರಗಳು ಎಚ್ಚರ ವಹಿಸಬೇಕು. ವೈಜ್ಞಾನಿಕ ಕ್ಷೇತ್ರದಲ್ಲಿ ಪ್ರಗತಿಯಾಗುತ್ತಿರುವ ಸಂದರ್ಭದಲ್ಲಿ ಕೊಡಗಿನ ಪ್ರತಿಭೆಗಳಿಗೆ ಕೊಡಗಿನಲ್ಲೇ ನೌಕರಿ ಸಿಗುವಂತಾಗಬೇಕು. ಐಟಿ, ಬಿಟಿ ಸಂಸ್ಥೆಗಳು ಸ್ಥಾಪನೆ ಆಗಬೇಕು.

ನಯನಾ ಲೋಕೇಶ್, ಉದ್ಯೋಗಿ, ಬಜೆಗುಂಡಿ ಗ್ರಾಮ

ಕೊಡಗಿನಲ್ಲಿಯೂ ಐಟಿ-ಬಿಟಿ ಆರಂಭ ಅತ್ಯವಶ್ಯಕ. ಕೊಡಗಿನಲ್ಲಿ ಕಾಫಿಯನ್ನೇ ಅವಲಂಭಿಸಲಾಗಿದೆ. ಆರ್ಥಿಕವಾಗಿ ಸದೃಢವಾಗಲು ಅನ್ಯಮಾರ್ಗವಿಲ್ಲ.

ಜಿಲ್ಲೆಯಲ್ಲಿನ ವಿದ್ಯಾವಂತರು, ಪ್ರತಿಭಾವಂತರು ಹೊಟ್ಟೆಪಾಡಿಗಾಗಿ ಹೊರ ಜಿಲ್ಲೆ, ರಾಜ್ಯ, ರಾಷ್ಟçಗಳಿಗೆ ತೆರಳಿ ಕೆಲಸ ಮಾಡುತಿದ್ದಾರೆ. ಉದ್ಯೋಗಾವಕಾಶಗಳು ಸ್ಥಳೀಯವಾಗಿಯೇ ದೊರೆಯಬೇಕು. ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಲೇಬೇಕು.

ಎಸ್.ಎಂ. ಧನುಷ್, ಸಾಫ್ಟ್ವೇರ್ ಎಂಜಿನಿಯರ್, ಸೋಮವಾರಪೇಟೆ

ಕೊಡಗಿನಲ್ಲಿ ಐಟಿ ಬಿಟಿ ಕಂಪನಿಗಳು ಆರಂಭವಾದರೆ ಹೆಚ್ಚಿನ ಯುವಕ ಯುವತಿಯರು ಉದ್ಯೋಗವನ್ನು ಅರಸುತ್ತ ಬೇರೆಡೆಗೆ ಹೋಗುವುದು ತಪ್ಪುತ್ತದೆ. ಸ್ಥಳೀಯ ಪ್ರತಿಭೆಗಳು ಕುಟುಂಬದಿAದ ದೂರ ಹೋಗಿ ಸಂಪಾದನೆ ಮಾಡುವುದಕ್ಕಿಂತ ಕುಟುಂಬಸ್ಥರೊAದಿಗೆ ಇದ್ದು ಸಂಪಾದನೆ ಮಾಡಲು ಇದೊಂದು ಉತ್ತಮ ಅವಕಾಶ. ಇದರೊಂದಿಗೆ ಸ್ಥಳೀಯ ಹೋಟೆಲ್, ಸಾರಿಗೆ, ಬಾಡಿಗೆ ಗೃಹಗಳು ಹೀಗೆ ಎಲ್ಲಾ ಕ್ಷೇತ್ರಗಳಿಗೂ ಆದಾಯದ ಮೂಲವಾಗಬಹುದು.

ಎ.ಬಿ. ಚರೀಷ್ ಪೊನ್ನಣ್ಣ, ವಿರಾಜಪೇಟೆ

ಕೊಡಗಿನಲ್ಲಿ ಐಟಿ ಬಿಟಿ ಕಂಪನಿಗಳು ಆರಂಭವಾದರೆ ಸಣ್ಣಪುಟ್ಟ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಯುವಕ ಯುವತಿಯರಿಗೆ ಅರ್ಹತೆಗೆ ತಕ್ಕಂತೆ ಉದ್ಯೋಗ ದೊರೆಯುತ್ತದೆ. ಜಿಲ್ಲೆಯಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆಯಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಉದ್ಯೋಗ ಪ್ರಮಾಣ ಹೆಚ್ಚಲು ಸಹಕಾರಿ. ಪದವಿ ಮುಗಿಸಿದ ವಿದ್ಯಾರ್ಥಿಗಳು ಉದ್ಯೋಗ ಅರಸಿ ಬೇರೆಡೆಗೆ ಹೋಗುವ ಪ್ರಮೇಯ ತಪ್ಪುತ್ತದೆ.

ಹೆಚ್.ಆರ್. ಸುಶ್ಮಿತಾ, ಬೇತ್ರಿ, ವಿರಾಜಪೇಟೆ

ಕೊಡಗಿನಲ್ಲಿ ಐಟಿ-ಬಿಟಿ ಹಬ್ ಬೇಕು ಎನ್ನುವ ಬೇಡಿಕೆಗೆ ಸಂಬAಧಿಸಿದAತೆ ಈ ತನಕ ನಡೆದಿರುವ ಬೆಳವಣಿಗೆಗಳನ್ನು ಪರಿಶೀಲಿಸಲಾಗುವುದು. ಈ ವಿಷಯದ ಕುರಿತು ಸಂಬAಧ ಪಟ್ಟ ಸಚಿವರ ಜತೆ ಚರ್ಚಿಸಲಾಗುವುದು. ಜಿಲ್ಲೆಯಲ್ಲಿ ಕಾಫಿ, ಕಾಫಿ ಉತ್ಪನ್ನಗಳು, ಪ್ರವಾಸೋದ್ಯಮಕ್ಕೆ ಸಂಬAಧಿಸಿದ ಸ್ಟಾರ್ಟಪ್‌ಗಳ ಸ್ಥಾಪನೆಗೂ ಸಾಕಷ್ಟು ಅವಕಾಶಗಳಿದ್ದು ಈ ಕುರಿತು ಕೂಡ ಚಿಂತಿಸುವ ಅಗತ್ಯವಿದೆ.

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು-ಕೊಡಗು ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net