

ಸದೇಶ್ ಕಾರ್ಮಾಡ್ ಮೈಸೂರು
ಕಳೆದ ನಾಲ್ಕು ವರ್ಷಗಳಿಂದ ಜನಪ್ರತಿನಿಧಿಗಳು ಇಲ್ಲದೆ ಆಡಳಿತವನ್ನು ಕಂಡ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗ ಳಿಗೆ ಶೀಘ್ರದಲ್ಲಿಯೇ ಚುನಾವಣೆ ನಡೆಯುವ ನಿರೀಕ್ಷೆ ಇದ್ದು, ಚುನಾವಣಾ ಆಕಾಂಕ್ಷಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿಗೆ ಸಂಬಂಧಿಸಿದಂತೆ ಮೇ ಅಂತ್ಯದೊಳಗೆ ಅಧಿಸೂಚನೆ ಹೊರಡಿಸ ಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೌಖಿಕವಾಗಿ ಮುಚ್ಚಳಿಕೆ ನೀಡಿದೆ. ಚುನಾವಣೆ ವಿಳಂಬ ಮಾಡುತ್ತಿರುವ ಕುರಿತು ಹೈಕೋರ್ಟ್‌ನಲ್ಲಿ ಸಲ್ಲಿಕೆಯಾದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯ ಸಂದರ್ಭ ಸರ್ಕಾರ ಈ ಭರವಸೆಯನ್ನು ನೀಡಿದೆ. ಮೀಸಲಾತಿಯನ್ನು 12 ವಾರಗಳಲ್ಲಿ ಪ್ರಕಟಿಸಲಾಗುವುದು ಎಂದು 19 ಡಿಸೆಂಬರ್ 2023ರಲ್ಲಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಭರವಸೆ ನೀಡಿತ್ತು. ಆದರೆ, ಭರವಸೆ ಪ್ರಕಾರ ರಾಜ್ಯ ಸರ್ಕಾರ ನಡೆದುಕೊಳ್ಳದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.
ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಎರಡನೇ ಬಾರಿ ನೀಡಿರುವ ಭರವಸೆಯ ಪ್ರಕಾರ ಮೇ ಅಂತ್ಯಕ್ಕೆ ಮೀಸಲಾತಿ ಪ್ರಕಟ ಮಾಡಿದರೆ ಜೂನ್ ಅಥವಾ ಜುಲೈನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಸಾಕಷ್ಟು ಆಕಾಂಕ್ಷಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧತೆ ಮಾಡಿಕೊಂಡಿದ್ದು, ಮೀಸಲಾತಿ ಖಾತ್ರಿಯಾದರೆ ತಮ್ಮ ಅಖಾಡವನ್ನು ಅಂತಿಮಗೊಳಿಸಿಕೊಳ್ಳುತ್ತಾರೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ನಂತರ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣವನ್ನು ಪ್ರವೇಶಿಸಿರುವ ಹಲವಾರು ಮಹನೀಯರು ಇದ್ದಾರೆ. ಹೀಗಾಗಿ ಜಿಲ್ಲಾ ಪಂಚಾಯಿತಿ ಚುನಾವಣೆ ರಾಜಕೀಯವಾಗಿ ಅಂತ್ಯಂತ ಮಹತ್ವ ಪಡೆದಿದೆ.
ಕಡಿಮೆಯಾದ ಕ್ಷೇತ್ರಗಳು: ಕಳೆದ ಬಾರಿ ಜಿಲ್ಲಾ ಪಂಚಾಯಿತಿ 49 ಸದಸ್ಯರನ್ನು ಹೊಂದಿತ್ತು. 2021ರಲ್ಲಿ ಕರ್ನಾಟಕ ಪಂಚಾಯತ್‌ರಾಜ್ ಸೀಮಾ ಆಯೋಗ ಹೊಸ ನಾಲ್ಕು ಕ್ಷೇತ್ರಗಳನ್ನು ಸೇರಿಸಿ ಕ್ಷೇತ್ರಗಳ ಸಂಖ್ಯೆಯನ್ನು 53ಕ್ಕೆ ಏರಿಕೆ ಮಾಡಿತ್ತು. ನಂತರ 2023ರಲ್ಲಿ 53 ಕ್ಷೇತ್ರಗಳಿಂದ 46ಕ್ಕೆ ಇಳಿಕೆ ಮಾಡಿ ಆಯೋಗ ಅಧಿಸೂಚನೆ ಹೊರಡಿಸಿತ್ತು. ಇದೀಗ ಮೀಸಲಾತಿ ಪ್ರಕಟವಾಗುವುದು ಮಾತ್ರ ಬಾಕಿ ಇದೆ.
ಅಭಿವೃದ್ಧಿಯಲ್ಲಿ ಹಿನ್ನಡೆ: ಜನಪ್ರತಿನಿಧಿಗಳು ಇಲ್ಲದೆ 4 ವರ್ಷಗಳಿಂದ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಾರ್ಯಗಳು ಕಾಣಲಿಲ್ಲ. ಎಲ್ಲವೂ ಅಧಿಕಾರಿಗಳ ದರ್ಬಾರ್‌ನಲ್ಲಿ ಆಡಳಿತ ನಡೆಯುತ್ತಿದೆ. ಪ್ರತಿ ತಿಂಗಳು ಸಾಮಾನ್ಯ ಸಭೆ, ಮೂರು ತಿಂಗಳಿಗೊಮ್ಮೆ ತ್ರೈಮಾಸಿಕ ಸಭೆ ನಡೆಸಿ ಜಿಲ್ಲೆಯ ಅಭಿವೃದ್ಧಿಯನ್ನು ಅವಲಕೋನ ಮಾಡಲಾಗುತಿತ್ತು. ಆದರೆ, ಜನಪ್ರತಿನಿಧಿಗಳು ಇಲ್ಲದ ಹಿನ್ನೆಲೆಯಲ್ಲಿ ಈ ಕಾರ್ಯ ನಡೆಯುತ್ತಿಲ್ಲ. ಚುನಾಯಿತ ಪ್ರತಿನಿಧಿಗಳು ಇದ್ದರೆ ಸರ್ಕಾರದ ಮೇಲೆ ಪ್ರಭಾವ ಬೀರಿ ಹೆಚ್ಚಿನ ಅನುದಾನ ತರಲು ಪ್ರಯತ್ನ ನಡೆಸುತ್ತಿದ್ದರು. ಆದರೆ, ಚುನಾಯಿತಿ ಪ್ರತಿನಿಧಿಗಳು ಇಲ್ಲದ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಪಡೆಯಲು ಸಹ ಜಿಲ್ಲಾ ಪಂಚಾಯಿತಿ ವಿಫಲವಾಗಿದೆ. ಗ್ರಾಮ ಮಟ್ಟದಲ್ಲಿ ಹಲವಾರು ಸಮಸ್ಯೆಗಳು ಇದ್ದು, ಅವುಗಳನ್ನು ಪರಿಹರಿಸಲು ಜನಪ್ರತಿನಿಧಿಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಕೊನೆಗೂ ಚುನಾವಣೆ ನಡೆಸಲು ಮನಸ್ಸು ಮಾಡಿರುವುದು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ.
ಕಳೆದ ಬಾರಿಯ ಜಿ.ಪಂ. ರಾಜಕೀಯ ಚಿತ್ರಣ
ಕಳೆದ ಬಾರಿ ಜಿಲ್ಲಾ ಪಂಚಾಯಿತಿಗೆ 2016ರಲ್ಲಿ ಚುನಾವಣೆ ನಡೆಯಿತು. 49 ಸದಸ್ಯ ಬಲದ ಜಿ.ಪಂ.ನಲ್ಲಿ ಕಾಂಗ್ರೆಸ್ 22, ಜೆಡಿಎಸ್ 18, ಬಿಜೆಪಿ 8 ಹಾಗೂ ಪಕ್ಷೇತರ ಸದಸ್ಯರೊಬ್ಬರು ಆಯ್ಕೆಯಾಗಿದ್ದರು. ಕಾಂಗ್ರೆಸ್ ದೊಡ್ಡ ಪಕ್ಷವಾದರೂ ಸ್ವತಂತ್ರವಾಗಿ ಅಧಿಕಾರಕ್ಕೇರು ವಷ್ಟು ಸಂಖ್ಯಾಬಲ ಇಲ್ಲದ ಹಿನ್ನೆಲೆಯಲ್ಲಿ ಅಧಿಕಾರದಿಂದ ದೂರ ಉಳಿಯಿತು. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಅಧ್ಯಕ್ಷರಾಗಿ ಜೆಡಿಎಸ್‌ನ ನಯೀಮಾ ಸುಲ್ತಾನ್, ಉಪಾಧ್ಯಕ್ಷರಾಗಿ ಬಿಜೆಪಿಯ ನಟರಾಜ್ ಆಯ್ಕೆಗೊಂಡಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಯ ಅವಧಿ 5 ವರ್ಷವಾದರೂ ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಒಡಂಬಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಯೀಮಾ ಸುಲ್ತಾನ್ ಹಾಗೂ ನಟರಾಜ್ ರಾಜೀನಾಮೆ ಸಲ್ಲಿಸಿದ್ದರು. ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯೊಂದಿಗೆ ಮೈತ್ರಿಯಿಂದ ದೂರ ಉಳಿದ ಜೆಡಿಎಸ್ ಪ್ರಮುಖರು ಕಾಂಗ್ರೆಸ್‌ನೊಂದಿಗೆ ಮೈತ್ರಿ ಬೆಳೆಸಿದರು. ಎರಡನೇ ಅವಧಿಯಲ್ಲಿ ಅಧ್ಯಕ್ಷೆಯಾಗಿ ಜೆಡಿಎಸ್‌ನ ಪರಿಮಳಾ ಶ್ಯಾಂ, ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಗೌರವಮ್ಮ ಸೋಮಶೇಖರ್ ಆಯ್ಕೆಗೊಂಡಿದ್ದರು.
ಮೈತ್ರಿ ಏರ್ಪಡುವುದೇ?
ಈ ಬಾರಿಯ ಲೋಕಸಭಾ ಚುನಾವಣೆಯ ನಂತರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದು, ಜೆಡಿಎಸ್ ಎನ್‌ಡಿಎ ಮೈತ್ರಿಕೂಟವನ್ನು ಸೇರಿಕೊಂಡಿದೆ. ಹೀಗಾಗಿ ಲೋಕಸಭಾ ಚುನಾವಣೆಯ ನಂತರ ಎದುರಾದ ವಿಧಾನ ಪರಿಷತ್ ಚುನಾವಣೆ ಯನ್ನು ಎರಡು ಪಕ್ಷಗಳು ಮೈತ್ರಿ ಮೂಲಕ ಎದುರಿಸಿದ್ದರು. ಅಲ್ಲದೆ, ರಾಜ್ಯದಲ್ಲಿ ಸಂಚಲನ ಮೂಡಿಸಿದ ಮುಡಾ ಹಗರಣದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಬೆಂಗಳೂರಿನಿಂದ ಮೈಸೂರಿನವರಿಗೆ ಪಾದಯಾತ್ರೆ ನಡೆಸಿ ದೊಡ್ಡ ಮಟ್ಟದ ಹೋರಾಟ ನಡೆಸಿತ್ತು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮೈತ್ರಿ ಮುಂದುವರೆಯಲಿದೆ ಎಂದು ಉಭಯ ಪಕ್ಷಗಳ ನಾಯಕರು ಹಲವಾರು ಬಾರಿ ಹೇಳಿಕೆ ನೀಡಿದ್ದಾರೆ. ಹಾಗಾಗಿ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಮೈತ್ರಿ ಏರ್ಪಟ್ಟರೆ ಯಾರಿಗೆ ಹೆಚ್ಚು ಲಾಭ, ನಷ್ಟ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿದೆ.