

ಕಲಬುರಗಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜತೆಗೆ ಕೌಶಲ ಅಗತ್ಯವಾಗಿದೆ. ಕೌಶಲಾಭಿವೃದ್ಧಿಯ ಮಾನವ ಸಂಪನ್ಮೂಲವಿದ್ದಲ್ಲಿ ಉದ್ಯೋಗ ಅವಕಾಶ ಹೆಚ್ಚಿನ ಪ್ರಮಾಣದಲ್ಲಿ ದೊರೆಯಲಿವೆ ಎಂದು ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವೇದಮಣಿ ತಿವಾರಿ ಹೇಳಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಾರತೀಯ ತಾಂತ್ರಿಕ ಶಿಕ್ಷಣ ಸಮಾಜ (ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್)ದ ೫೨ನೇ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕೌಶಲವಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಕೆಲಸಗಳು ಸಿಗುತ್ತವೆ. ಪಿಡಿಎ ಕಾಲೇಜಿನಲ್ಲಿ ಸೆಂಟರ್ ಆಫ್ ಎಕ್ಸ್ಲೆನ್ಸ್ ಪ್ರಾರಂಭ ಮಾಡಿರುವುದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಐಎಸ್‌ಟಿಇ ಅಧ್ಯಕ್ಷ ಡಾ.ಪ್ರತಾಪಸಿಂಗ್ ದೇಸಾಯಿ ಮಾತನಾಡಿ, ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್ (ಐಎಸ್‌ಟಿಇ) ತಾಂತ್ರಿಕ ಶಿಕ್ಷಣ ಕ್ಷೇತ್ರದ ಗುಣಮಟ್ಟ ಹೆಚ್ಚಿಸುವುದರ ಜತೆಗೆ ತಂತ್ರಜ್ಞರ ಉತ್ಪಾದನೆ, ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಮಾತನಾಡಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಬಸವರಾಜ ಗಾದಗಿ, ಎಚ್‌ಕೆಇ ಆಡಳಿತ ಮಂಡಳಿ ಸದಸ್ಯ ಬಸವರಾಜ ಖಂಡೇರಾವ್, ಪಂಜಾಬ್ ಮಹಾರಾಜ ರಂಜಿತಸಿಂಗ್ ತಾಂತ್ರಿಕ ವಿವಿ ಕುಲಪತಿ ಡಾ.ಬುಟಾಸಿಂಗ್ ಸಿಧು, ಬೆಂಗಳೂರಿನ ಎಥ್ಮೋಟೆಕ್ ಗ್ರೂಫ್‌ನ ಚೇರ್ಮನ್ ಡಾ.ಕಿರಣ ರಾಜಣ್ಣ, ಚನ್ನೈನ ಅಣ್ಣಾ ವಿವಿಯ ಕುಲಪತಿ ಡಾ.ಆರ್.ವೆಲರಾಜ್, ಗ್ವಾಲಿಯರ್ ಅಟಲ್ ಬಿಹಾರಿ ವಾಜಪೇಯಿ ಐಐಐಟಿಎಂ ನಿರ್ದೇಶಕ ನಿವಾಸ್‌ಸಿಂಗ್ ಇತರರಿದ್ದರು.
ಪಿಡಿಎ ಇಂಜನಿಯರಿAಗ್ ಕಾಲೇಜ್ ಪ್ರಾಚಾರ್ಯ ಡಾ.ಎಸ್.ಆರ್. ಮೀಸೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
೧೯೬೮ರಲ್ಲಿ ಐಎಸ್‌ಟಿಇ ಅಸ್ತಿತ್ವಕ್ಕೆ ಬಂದಿದ್ದು, ಈವರೆಗೆ ದೊಡ್ಡದಾಗಿ ಬೆಳೆದಿದೆ. ೧.೫೦ ಲಕ್ಷ ಸದಸ್ಯತ್ವ ಹೊಂದಿದ್ದು, ಸಹಸ್ರಾರು ಪ್ರಾಧ್ಯಾಪಕರು, ೪೫೦೦ಕ್ಕೂ ಅಧಿಕ ಸಂಘ -ಸಂಸ್ಥೆಗಳು ಐಎಸ್‌ಟಿಇ ಅಡಿ ಇವೆ. ತಾಂತ್ರಿಕ ಶಿಕ್ಷಣದ ಬಲವರ್ಧನೆಯೇ ಮೂಲ ಉದ್ದೇಶ.
| ಡಾ.ಪ್ರತಾಪಸಿಂಗ್ ದೇಸಾಯಿ, ಅಧ್ಯಕ್ಷ, ಐಎಸ್‌ಟಿಇ