ನೋಟಿಸ್ ನೀಡಿರುವುದು ಶಿಕ್ಷಕರ ನೈತಿಕತೆಗೆ ಧಕ್ಕೆ: ಸಚಿವರಿಗೆ ಎಂಎಲ್ ಸಿ ಪತ್ರ

Published on

ಮೈಸೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳ ಮುಖ್ಯಸ್ಥರಿಗೆ ಕಾರಣ ಕೇಳಿ ನೋಟಿಸ್ ನೀಡಿರುವುದು ಶಿಕ್ಷಕರ ನೈತಿಕತೆಗೆ ಧಕ್ಕೆ ತರುವಂತಿದೆ ಎಂದು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಅವರು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಫಲಿತಾಂಶ ಕುಸಿತದ ಕುರಿತು ಸಂಬಂಧಪಟ್ಟ ಶಾಲಾ ಮುಖ್ಯಸ್ಥರು, ಇಲಾಖೆ ಅಧಿಕಾರಿಗಳು, ಕ್ಷೇತ್ರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ಆಯೋಜಿಸಿ ಪರಾಮರ್ಶಿಸಿ ಅವರಿಂದ ಸಮಜಾಯಿಷಿ ಪಡೆದುಕೊಳ್ಳಬಹುದಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೋಟಿಸ್ ನೋಡುವ ಮುನ್ನ ಶಿಕ್ಷಕರ ಕಾರ್ಯವೈಖರಿ, ಕಾರ್ಯ ವ್ಯಾಪ್ತಿಯನ್ನು ಅರ್ಥೈಸಿಕೊಳ್ಳಬಹುದಾಗಿತ್ತು. ಶಿಕ್ಷಕರಿಗೆ ಕೇವಲ ಪಾಠ, ಪ್ರವಚನ ಅಲ್ಲದೆ ಬಿಸಿಯೂಟ, ಮೊಟ್ಟೆ ವಿತರಣೆ, ನಾನಾ ಸಮೀಕ್ಷೆ, ಚುನಾವಣಾ ಕಾರ್ಯ, ಇಲಾಖೆ ಮಾಹಿತಿ ಸಂಗ್ರಹಣೆ ಸೇರಿದಂತೆ ನಾನಾ ಒತ್ತಡದಲ್ಲಿ ಇದ್ದಾರೆ. ಶಿಕ್ಷಕರ ಇಷ್ಟೆಲ್ಲಾ ಕಾರ್ಯ ಭಾರದ ನಡುವೆ ನಿರೀಕ್ಷೆಯಷ್ಟು ಫಲಿತಾಂಶ ಪಡೆಯುವ ಕುರಿತು ಆಲೋಚಿಸಬೇಕಿದೆ ಎಂದು ಹೇಳಿದ್ದಾರೆ.

ಆದ್ದರಿಂದ ಸದರಿ ವಿಚಾರವಾಗಿ ಆತುರದ ನಿರ್ಧಾರ ಕೈಗೊಳ್ಳುವ ಬದಲು ವಿಶೇಷ ಆಸಕ್ತಿ ವಹಿಸಿ ಸಭೆ ಕರೆದು ಎಲ್ಲ ವಿಷಯವನ್ನು ಚರ್ಚಿಸಿ ಆರೋಗ್ಯಕರ ನಿರ್ಧಾರ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net