ಬಗರ್‌ಹುಕುಂ ಮಂಜೂರಾತಿ ಪತ್ರ ನೀಡಿ: ದಲಿತ ಮುಖಂಡರು ಮನವಿ

07 c n halli DSS photo 1.jpeg
Published on

ಚಿಕ್ಕನಾಯಕನಹಳ್ಳಿ: ಹಂದನಕೆರೆ ಹೋಬಳಿಯ ಬೇವಿನಹಳ್ಳಿಯಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಉಳುಮೆದಾರರಿಗೆ ಬಗರ್‌ಹುಕುಂ ಮಂಜೂರಾತಿ ಪತ್ರ ನೀಡುವಂತೆ ಒತ್ತಾಯಿಸಿ ಬುಧವಾರ ಗ್ರೇಡ್-2 ತಹಸೀಲ್ದಾರ್ ಮೋಹನ್‌ಕುಮಾರ್‌ಗೆ ಉಳುಮೆದಾರರು, ದಲಿತ ಮುಖಂಡರು ಮನವಿ ಸಲ್ಲಿಸಿದರು.

26 ವರ್ಷದಿಂದ ಸಾಗುವಳಿ ಮಾಡುತ್ತಾ ಬಂದಿದ್ದು, ಈಗ ಕೆಲವರು ಅಲ್ಲಿ ಅತಿಕ್ರಮವಾಗಿ ಗುಡಿಸಲು ಹಾಕಿಕೊಂಡು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಬೇವಿನಹಳ್ಳಿಯ ರೈತ ಬಸವರಾಜು ಆರೋಪಿಸಿದರು.

ಬೇವಿನಹಳ್ಳಿ ಸ.ನಂ.99ರಲ್ಲಿ 4 ಎಕರೆ ಜಮೀನನ್ನು 26 ವರ್ಷದಿಂದ ಉಳುಮೆ ಮಾಡಿ ತೆಂಗು, ರಾಗಿ ಬೆಳೆಯಲಾಗುತ್ತಿದೆ. ಈಗ ಜಮೀನಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಸರ್ವೇಸ್ಕೇಚ್, ಮಾಡಿಸಿ ಮಂಜೂರಾತಿಗೆ ಶಿಫಾರಸು ಮಾಡಿದ್ದು, ಸರ್ಕಾರಕ್ಕೆ ಟಿ.ಟಿ.ಹಣವನ್ನೂ ಸಂದಾಯ ಮಾಡಲಾಗಿದೆ.

ಈ ಜಾಗದಲ್ಲಿ ಈಗ 30 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದ ನಾಗರಾಜು, ಶಂಕರಯ್ಯ, ಮಂಜುನಾಥ ಏಕಾಏಕಿ ನಮ್ಮ ಜಮೀನಿನಲ್ಲಿ ಗುಡಿಸಲು ನಿರ್ಮಿಸಿಕೊಂಡು ತೊಂದರೆ ನೀಡುತ್ತಿದ್ದಾರೆ ಎಂದರು.

ತಾಲೂಕು ಮಾದಿಗ ದಂಡೋರದ ಜಿಲ್ಲಾ ಕಾರ್ಯದರ್ಶಿ ಜೆ.ಸಿ.ಪುರ ಗೋವಿಂದರಾಜು ಮಾತನಾಡಿ, 30 ವರ್ಷಗಳಿಂದ ಉದ್ಯೋಗಕ್ಕಾಗಿ ಬೆಂಗಳೂರು ಸೇರಿದ್ದವರು ಈಗ ಕರೊನಾ ಭೀತಿಯಿಂದ ಗ್ರಾಮಗಳಿಗೆ ಹಿಂತಿರುಗಿ ಗ್ರಾಮದಲ್ಲಿ ನೆಮ್ಮದಿಯಿಂದ ಸಾಗುವಳಿ ಮಾಡುತ್ತಿದ್ದವರಿಗೆ ತೊಂದರೆ ನೀಡುತ್ತಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ದಲಿತ ಮುಖಂಡರಾದ ಸಿ.ಎಸ್.ಲಿಂಗದೇವರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net