

ಕಾಸರಗೋಡು: ಜಿಲ್ಲಾಮಟ್ಟದ ಪಟ್ಟಾ ಮೇಳದಲ್ಲಿ ಅಂಗವಿಕಲ ರಾಜೇಶ್ ಹಾಗೂ ತಮಿಳ್ನಾಡಿನಿಂದ ಆಗಮಿಸಿ ಕಾಸರಗೋಡು ಜಿಲ್ಲೆಯಲ್ಲಿ ನೆಲೆಸಿದ್ದ ಜ್ಯೋತಿ ಅವರಿಗೆ ಸಚಿವ ಕೆ.ರಾಜನ್ ಹಕ್ಕುಪತ್ರ ವಿತರಿಸಿದರು.
ಎರಡೂ ಕಾಲುಗಳು ನಿಷ್ಕ್ರಿಯಗೊಂಡಿದ್ದ ಕುಂಬ್ಡಾಜೆ ಗ್ರಾಮದ 39ರ ಹರೆಯದ ರಾಜೇಶ್ ಗಾಲಿಕುರ್ಚಿಯಲ್ಲಿ ವೇದಿಕೆ ಏರಲು ಯತ್ನಿಸುತ್ತಿದ್ದಾಗ ಸಚಿವರು ತಾವೇ ವೇದಿಕೆಯಿಂದ ಕೆಳಗಿಳಿದು ಹಕ್ಕುಪತ್ರ ಹಸ್ತಾಂತರಿಸಿದರು. ರಾಜೇಶ್ ಲಾಟರಿ ಏಜೆಂಟ್ ಆಗಿದ್ದು, ಪ್ರಸಕ್ತ ಕೂಡ್ಲುವಿನಲ್ಲಿರುವ ಕಾಟ್ರಸ್‌ನಲ್ಲಿ ಬಾಡಿಗೆಗೆ ವಾಸವಾಗಿದ್ದರು. ಇದೀಗ ಭೂಮಿ ಮಂಜೂರಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದು, ಲೈಫ್ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಜ್ಯೋತಿ ಅವರ ಕುಟುಂಬದ ಹಿರಿಯರು 75 ವರ್ಷಗಳ ಹಿಂದೆ ತಮಿಳ್ನಾಡಿನ ತಿರುನಲ್ವೇಲಿಯಿಂದ ಕೇರಳದ ಪತ್ತನಂತಿಟ್ಟಕ್ಕೆ ಬಂದು ನೆಲೆಸಿದ್ದರು. ಇದೀಗ ಸ್ವಂತ ಜಾಗದ ಹಕ್ಕುಪತ್ರ ಲಭಿಸಿದ ಸಂತೋಷದಲ್ಲಿದ್ದಾರೆ. ಜ್ಯೋತಿ ಪತ್ತನಂತಿಟ್ಟದಿಂದ ಕಾಸರಗೋಡು ಕಾಞಿರಪೋಯಿಗೆ ಬಂದು ಲಾಟರಿ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಲೈಫ್ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.