

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಹೊನಗಾನಹಳ್ಳಿ ಗ್ರಾಮದಲ್ಲಿನ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿದ ಹಿನ್ನೆಲೆಯಲ್ಲಿ ಗೌರವಾರ್ಥ ಬಡಾವಣೆಗೆ ಶಾಸಕ ರವಿಕುಮಾರ್ ಗಣಿಗ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
ಶಾಸಕರ ಸಹಕಾರದೊಂದಿಗೆ ಗ್ರಾಮಸ್ಥರು, ಸ್ಥಳೀಯ ಮುಖಂಡರು ಒಗ್ಗೂಡಿ ಬಡಾವಣೆ ನಿರ್ಮಾಣ ಮಾಡಿದ್ದಾರೆ. ಇಲ್ಲಿ ವಾಸ ಮಾಡಲು ಅನುಕೂಲವಾಗುವಂತೆ ನಿವೇಶನಗಳ ಹಸ್ತಾಂತರ ಮತ್ತು ಪಹಣಿ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು. ಇದರೊಂದಿಗೆ ಎಂಟು ಕುಟುಂಬದ ಬದುಕಿಗೆ ದೊಡ್ಡ ಉಡುಗೊರೆ ಕೊಟ್ಟಂತಾಯಿತು.
ಬಳಿಕ ಮಾತನಾಡಿದ ಶಾಸಕ ರವಿಕುಮಾರ್ ಗಣಿಗ, ಖಾಸಗಿ ಒಡೆತನದಲ್ಲಿ ಈ ರೀತಿ ಸಮಾಜಮುಖಿ ಕಾರ್ಯ ಮಾಡಿರುವುದು ಶ್ಲಾಘಿಸುವ ವಿಚಾರ. ಇದೇ ಮಾದರಿಯಲ್ಲಿ ಎಲ್ಲ ಗ್ರಾಮದ ಮುಖಂಡರು ನಡೆದುಕೊಂಡರೆ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಲಿದೆ. ನನ್ನ ಹೆಸರಿನಲ್ಲಿ ಬಡಾವಣೆ ಮಾಡಿದ್ದೀರಿ. ಹಾಗಾಗಿ ಮನೆ ಮಾಡಿಕೊಡುವುದು ನನ್ನ ಜವಾಬ್ದಾರಿ. ಬಡಾವಣೆ ಬಳಿ ಬಸ್ ನಿಲ್ದಾಣಕ್ಕೆ ಮನವಿ ಮಾಡಿದ್ದೀರಿ. ಅದಕ್ಕೆ 5 ಲಕ್ಷ ರೂ ಮಂಜೂರು ಮಾಡಿದ್ದೇನೆ. ಎಸಿಪಿ ಗ್ರ್ಯಾಂಟ್‌ನಲ್ಲಿ 10 ಲಕ್ಷ ರೂಗೆ ಬೇಡಿಕೆ ನೀಡಿದ್ದೀರಿ. ಆದರೆ ನಾನು 25 ಲಕ್ಷ ರೂ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಈಗಾಗಲೇ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ 25 ಕಡೆ ಸರ್ಕಾರಿ ಸ್ಥಳ ಗುರುತಿಸಿ ಬಡ ಕುಟುಂಬ ಮತ್ತು ನಿವೇಶನ ವಂಚಿತರಿಗೆ ಹಂಚುವ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ. ತಂಗಳಗೆರೆ ಗ್ರಾಮದಲ್ಲಿ 300 ಕುಟುಂಬಕ್ಕೆ ಮನೆ ಹಂಚಲಾಗುವುದು. ಅಂತೆಯೇ ಕೆರಗೋಡು ಗ್ರಾಮದಲ್ಲಿ 50 ಕುಟುಂಬಕ್ಕೆ ನಿವೇಶನ ನೀಡಲಾಗಿದೆ. ಮಂಡ್ಯ ನಗರದಲ್ಲಿ ನ್ಯೂ ತಮಿಳು ಕಾಲನಿಯ 265 ಕುಟುಂಬಕ್ಕೆ ಹಕ್ಕು ಪತ್ರ ವಿತರಣೆ ಪ್ರಕ್ರಿಯೆ 75 ವರ್ಷದಿಂದ ನನೆಗುದಿಗೆ ಬಿದ್ದಿತ್ತು. ಅದನ್ನು ಬಗೆಹರಿಸಿ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಲೇಬರ್ ಕಾಲನಿ ಮತ್ತು ಮುಸ್ಲಿಂ ಬ್ಲಾಕ್‌ನಲ್ಲಿ 600 ಜನರಿಗೆ ಹಕ್ಕು ಪತ್ರ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನ ಮಾಡಿ ವಿತರಣೆ ಮಾಡಲಾಗುವುದು. ನನ್ನ ಅಧಿಕಾರಾವಧಿಯಲ್ಲಿ ಆದಷ್ಟು ಬಡ ಕುಟುಂಬಕ್ಕೆ ನಿವೇಶನ ನೀಡುತ್ತೇನೆ. ನಮ್ಮದು ಜನಪರ ಸರ್ಕಾರ. ಪ್ರತಿ ತಿಂಗಳು ಐದು ಕೆ.ಜಿ ಅಕ್ಕಿ ಮತ್ತು ಹಣ ನೀಡಲಾಗುತ್ತಿತ್ತು. ಇನ್ನು ಮುಂದೆ 10 ಕೆ.ಜಿ ಅಕ್ಕಿಯನ್ನು ವಿತರಣೆ ಮಾಡಲಾಗುವುದು. ವಿರೋಧಿಗಳು ಯಾರೇ ಏನೇ ಮಾತನಾಡಿದರು. ನಾವು ಬಡವರ ಪರ ಕೆಲಸ ಮಾಡುತ್ತೇವೆ ಎಂದರು.
ಸಾತನೂರು ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಎನ್.ವೆಂಕಟೇಶ್, ಪ್ರಕಾಶ್, ಸುರೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲೇಶ್, ಮುಖಂಡ ಕೋನಪ್ಪ ಇತರರಿದ್ದರು.