

ಕೆ.ಆರ್.ಸಾಗರ: ಹಲವು ವರ್ಷಗಳಿಂದ ಹಕ್ಕುಪತ್ರ ಇದ್ದರೂ ಖಾತೆ ಮಾಡಲು ಆಗದ ಸ್ಥಿತಿಯಲ್ಲಿರುವ ಕೆ.ಆರ್.ಸಾಗರ ಗ್ರಾಮಸ್ಥರಿಗೆ ಮೇ ತಿಂಗಳ ಕೊನೇ ವಾರದಲ್ಲಿ ಹಕ್ಕುಪತ್ರದಲ್ಲಿದ್ದ ಕೆಲ ಲೋಪದೋಷಗಳನ್ನು ಸರಿಪಡಿಸಿ ಹಕ್ಕಪತ್ರ ವಿತರಿಸಲಾಗುತ್ತದೆ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಹೇಳಿದರು.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕೆಲವರು ನಮಗೆ ಹಕ್ಕುಪತ್ರ ನೀಡಿಲ್ಲ, ಲೋಪವಾಗಿದೆ ಎಂದು ನೀಡಿದ ದೂರಿನ ಹಿನ್ನೆಲೆಯಲ್ಲಿ ಸಮಿತಿ ರಚನೆ ಮಾಡಿ ಎಲ್ಲ ಹಕ್ಕುಪತ್ರಗಳನ್ನು ಮರು ಪರಿಶೀಲಿಸಿ, ಆ ಹಕ್ಕುಪತ್ರದಲ್ಲಿನ ಜಾಗಕ್ಕೆ ಉಪ ತಹಸೀಲ್ದಾರ್ ನೇತೃತ್ವದಲ್ಲಿ ಮತ್ತೆ ಅಳತೆ ಮಾಡಿಸಲಾಗಿದೆ ಎಂದು ಪತ್ರಿಕೆಗೆ ತಿಳಿಸಿದರು.
ಕೆಲ ಹಕ್ಕು ಪತ್ರಗಳಲ್ಲಿ ವಿಸ್ತೀರ್ಣ ಹಾಗೂ ಚಕ್ಕುಬಂದಿ ಸೇರಿದಂತೆ ಕೆಲವು ಲೋಪದೋಷಗಳಾಗಿದ್ದು, ಇದನ್ನು ಸರಿಪಡಿಸಿ ಮತ್ತೆ ಹಕ್ಕು ಪತ್ರ ನೀಡಲಾಗುತ್ತಿದೆ. ಜತೆಗೆ ಕೆಲ ಕಾರಣದಿಂದ ಬಿಟ್ಟು ಹೋಗಿದ್ದ ಹಲವಾರು ಗ್ರಾಮಸ್ಥರಿಗೆ ಹಕ್ಕುಪತ್ರವನ್ನು ಮುಂದಿನ ಮೇ ತಿಂಗಳ ಮೂರನೇ ವಾರದ ನಂತರ ನೀಡಲಾಗುತ್ತದೆ. ಹಕ್ಕುಪತ್ರ ಪಡೆಯುವವರು ತಮ್ಮ ಮೂಲ ದಾಖಲಾತಿ ನೀಡಬೇಕು ಎಂದು ಹೇಳಿದರು.
ಕೆಲ ಲೋಪದೋಷ ಇರುವ ಹಕ್ಕುಪತ್ರಗಳನ್ನು ಸರಿಪಡಿಸಿ ಹೊಸ ಹಕ್ಕು ಪತ್ರ ನೀಡಲಾಗುತ್ತದೆ. ನಂತರ ಸರ್ಕಾರದ ಮಾರ್ಗಸೂಚಿಯಂತೆ ಖಾತೆ ಪ್ರಕ್ರಿಯೆ ಮಾಡಲಾಗುತ್ತದೆ ಎಂದು ತಹಸೀಲ್ದಾರ್ ಪರುಶರಾಮ್ ಸತ್ತಿಗೇರಿ ಹೇಳಿದರು.