ಬೀದಿಗೆ ಬಂತು ಹುಂಡಿ ಹಣ ಎಣಿಕೆ ವಿಚಾರ

koti aanjaneya temple Manchanayakanhallyi
Published on

ಕೋತಿ ಆಂಜನೇಯ ದೇವಾಲಯ ಟ್ರಸ್ಟ್​ ಅಧ್ಯಕ್ಷರ ವಿರುದ್ಧ ಆರೋಪ

ಬಿಡದಿ ಠಾಣೆ ಮೆಟ್ಟಿಲೇರಿದ ಮಹಿಳೆ

ಚೇತನ್​ ಚಕ್ಕೆರೆ ಬಿಡದಿ

ಪ್ರತಿಷ್ಠಿತ ದೇವಾಲಯದ ಹುಂಡಿ ಹಣ ಎಣಿಕೆ ವಿಚಾರ ಈಗ ಬೀದಿಗೆ ಬಂದಿದೆ. ದೇವಾಲಯದ ಟ್ರಸ್ಟಿಗಳ ಗಮನಕ್ಕೂ ತಾರದೆ ಹಣ ಎಣಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿಚಾರ ಈಗ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.

ಹೌದು ಬೆಂಗಳೂರು- ಮೈಸೂರು ಹೆದ್ದಾರಿಯ ಹನುಮಂತ ನಗರದಲ್ಲಿರುವ ಕೋತಿ ಆಂಜನೇಯ ದೇವಸ್ಥಾನಕ್ಕೆ ಪ್ರತಿದಿನ ಸಾಕಷ್ಟು ಭಕ್ತರು ಭೇಟಿ ನೀಡಿ ಹುಂಡಿಗೆ ಹಣ ಹಾಕುತ್ತಾರೆ. ಹುಂಡಿ ಹಣ ಎಣಿಕೆ ವಿಚಾರದಲ್ಲಿ ಟ್ರಸ್ಟ್​ ಅಧ್ಯಕ್ಷರು ಏಕಪಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಟ್ರಸ್ಟ್​ ಸದಸ್ಯೆ ಎನ್ನಲಾದ ವಿಜಯಲಕ್ಷ್ಮಮ್ಮ  ಎಂಬುವರು ವಕೀಲರ ಮೂಲಕ ಬಿಡದಿ ಠಾಣೆ ಮೆಟ್ಟಿಲು ಹತ್ತಿದ್ದಾರೆ.

ದೇವಾಲಯಕ್ಕೆ ಸಂಬಂಧಿಸಿದಂತೆ ವೀರಾಂಜನೇಯ ಟ್ರಸ್ಟ್​ ಇದ್ದು, 4 ಮಂದಿಯನ್ನು ಟ್ರಸ್ಟಿಗಳನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದು, ಅವರ ಪತ್ನಿಯರಿಗೆ ಸದಸ್ಯತ್ವ ಇದೆ ಎನ್ನಲಾಗಿದೆ. ತಿಮ್ಮೇಗೌಡ ಅಧ್ಯಕ್ಷರಾಗಿದ್ದು, ಆಂಜನಪ್ಪ ಟ್ರಸ್ಟಿಯಾಗಿದ್ದಾರೆ. ಈ ವಿಚಾರವಾಗಿ ಟ್ರಸ್ಟಿಗಳಿಗೆ ನೋಟಿಸ್​ ನೀಡಿಲ್ಲ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ.

counting hundi at Manchanayakanhally aanjaneya temple

28ರಂದು ಹುಂಡಿ ಎಣಿಕೆ

ಸೆ.28ರಂದು ದೇವಾಲಯದ ಸಭಾಂಗಣದಲ್ಲಿ ಹುಂಡಿ ಎಣಿಕೆ ನಡೆದಿತ್ತು. 25ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. 3&4 ತಿಂಗಳಿಗೆ ಒಮ್ಮೆ ಹುಂಡಿ ಎಣಿಕೆ ಪ್ರಕ್ರಿಯೆ ನಡೆಸಲಾಗುತ್ತದೆ. ದೇವಾಲಯದ ಯಾವುದೇ ಕಾರ್ಯ ಮಾಡಬೇಕಾದರೆ ಟ್ರಸ್ಟಿಗಳ ಗಮನಕ್ಕೆ ತರಬೇಕಾಗುತ್ತದೆ.

ಆದರೆ, ಗುರುವಾರ ಹುಂಡಿ ಹಣ ಎಣಿಕೆ ಮಾಡುವ ಸಂಬಂಧ ಟ್ರಸ್ಟ್​ ಅಧ್ಯಕ್ಷ ತಿಮ್ಮೇಗೌಡ ಅವರು ಇತರ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಈ ವಿಚಾರವಾಗಿ ವಿಜಯಲ್ಮ ಗಲಾಟೆ ಮಾಡಿ ಬಿಡದಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಪಿಐ ಶಂಕರ್​ನಾಯಕ್​ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ತಿಮ್ಮೇಗೌಡ ಹಾಗೂ ವಿಜಯಲಕ್ಷ್ಮಮ್ಮ  ಅವರಿಗೆ ದಾಖಲೆಗಳ ಸಮೇತ ಠಾಣೆಗೆ ಬರುವಂತೆ ಸೂಚಿಸಿದ್ದಾರೆ.

ಹುಂಡಿ ಹಣಕ್ಕೆ ಯಾವುದೇ ಲೆಕ್ಕಾಚಾರ ಇಲ್ಲ. ಇದಕ್ಕೆ ಕಡಿವಾಣ ಹಾಕಬೇಕು. ಟ್ರಸ್ಟ್​ನಲ್ಲಿ ಇರುವವರು ಬೆಂಗಳೂರಿನವರಾಗಿದ್ದು, ಸ್ಥಳಿಯರನ್ನು ಸೇರಿಸಿಕೊಳ್ಳುವುದಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಟ್ರಸ್ಟ್​ ಸೇರಿ 25 ವರ್ಷ ಕಳೆದಿದೆ. ಇದೀಗ ಅಧ್ಯಕ್ಷನಾಗಿದ್ದೇನೆ. ಇದುವರೆಗೂ ಕಪ್ಪುಚುಕ್ಕೆ ಬಾರದಂತೆ ದೇವಾಲಯದ ಅಭಿವೃದ್ಧಿ ಮಾಡಿಕೊಂಡು ಬಂದಿದ್ದೇನೆ. ಆರೋಪ ಮಾಡುತ್ತಿರುವ ವಿಜಯಲಕ್ಷ್ಮಮ್ಮ ಎಂಬುವರಿಗೂ ಟ್ರಸ್ಟ್​ಗೂ ಸಂಬಂಧ ಇಲ್ಲ. ದೇವಾಲಯದ ಹಣ ದುರುಪಯೋಗವಾಗಿಲ್ಲ. ಎಲ್ಲ ಆರೋಪಗಳಿಗೂ ಸೋಮವಾರ ಉತ್ತರ ನೀಡುತ್ತೇನೆ.

ಡಾ.ಎಂ.ತಿಮ್ಮೇಗೌಡ, ಅಧ್ಯಕ್ಷ, ವೀರಾಂಜನೇಯ ಟ್ರಸ್ಟ್​

ಹುಂಡಿ ಹಣ ಎಣಿಕೆ ಮಾಡುವಾಗ ಅನುಸರಿಸಬೇಕಾದ ಕ್ರಮಗಳನ್ನು ಗಾಳಿಗೆ ತೂರಲಾಗಿದೆ. ಬೆಂಗಳೂರಿನಿಂದ ಜನರನ್ನು ಕರೆತಂದು ಹಣ ಎಣಿಕೆ ಮಾಡಿಸಿದ್ದಾರೆ. ಯಾವುದೇ ವೀಡಿಯೋ ಚಿತ್ರೀಕರಣ ಮಾಡಿಸಿಲ್ಲ. ರಸ್ತೆಗೆ ದೇವಾಲಯದ ಜಾಗ ಹೋಗಿದ್ದು ಸುಮಾರು 3.5 ಕೋಟಿ ರೂ. ಪರಿಹಾರವಾಗಿ ಬಂದಿದೆ. ಈ ಸಂಬಂಧ ಭಕ್ತರಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಶಾಸಕರು ಹಾಗೂ ಜಿಲ್ಲಾಡಳಿತ ಗಮನಹರಿಸಬೇಕಿದೆ.

ಗಾಣಕಲ್​ ನಟರಾಜ್​, ತಾಪಂ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net