

ಶಿವಮೊಗ್ಗ: ಬರದ ಕಾರಣದಿಂದ ರಾಜ್ಯದ ವಿವಿಧೆಡೆ 137 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆ ತಡೆ ಹಾಗೂ ಬರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ತ್ವರಿತವಾಗಿ ಶ್ವೇತಪತ್ರ ಹೊರಡಿಸಬೇಕೆಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಬರದ ಬಗ್ಗೆ ಇನ್ನೂ ಕಂದಾಯ ಇಲಾಖೆಯಿಂದ ಸಮೀಕ್ಷೆ ನಡೆಸಿಲ್ಲ. ರಾಜ್ಯದಲ್ಲಿ ಸರ್ಕಾರವೊಂದು ಇದೆ ಎಂಬ ಅನುಭವವೇ ಆಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ತೆರಳಿ ಬರದ ಸ್ಥಿತಿಗತಿ ಅವಲೋಕನ ಮಾಡಿಲ್ಲ. ಬದಲಿಗೆ ಜನಪ್ರಿಯತೆಗೆ ಹವಣಿಸುವ ಕೀಳು ಅಭಿರುಚಿ ತೋರಿಸುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಸಚಿವರೊಬ್ಬರು ಹೇಳಿರುವುದು ಇಡೀ ರೈತ ಸಮುದಾಯಕ್ಕೆ ಮಾಡಿರುವ ಅವಮಾನ. ಸಚಿವರು ರೈತರ ಸಂಕಷ್ಟಗಳಿಗೆ ಸ್ಪಂದಿಸದಿದ್ದರೆ ಅನ್ನದಾತನ ಶಾಪ ಸಚಿವರ ಮಕ್ಕಳಿಗೆ ತಟ್ಟದೆ ಇರುವುದಿಲ್ಲ ಎಂದು ಈಶ್ವರಪ್ಪ ಕಿಡಿಕಾರಿದರು.
ಗ್ಯಾರಂಟಿಗಳು ವಿಫಲ: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳ ಆಶ್ವಾಸನೆಯನ್ನು ನಂಬಿ ನಾವು ಮೋಸ ಹೋಗಿದ್ದೇವೆ ಎಂಬ ವಾಸ್ತವ ಸಂಗತಿ ಈಗ ರಾಜ್ಯದ ಜನರ ಅರಿವಿಗೆ ಬಂದಿದೆ. ಸರ್ಕಾರದ ಐದೂ ಗ್ಯಾರಂಟಿಗಳು ಸಂಪೂರ್ಣ ವಿಫಲವಾಗಿವೆ. ಇವರ ಕೊಡುಗೆಗಳು ಎಲ್ಲರಿಗೂ ಸಿಗುತ್ತಿಲ್ಲ ಎಂದು ಕೆ.ಎಸ್.ಈಶ್ವರಪ್ಪ ದೂರಿದರು.
ವರ್ಷವಿಡೀ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈಗ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ವಿದ್ಯಾನಿಧಿ ಡಿಸೆಂಬರ್‌ವರೆಗೆ ಜಾರಿಯಿಲ್ಲ ಎಂದು ಸಚಿವರೇ ಹೇಳಿದ್ದಾರೆ. ಅನ್ನಭಾಗ್ಯ ಅಧ್ವಾನವಾಗಿದೆ. ಗೃಹಜ್ಯೋತಿಯ ಉಚಿತ ವಿದ್ಯುತ್ ಇರಲಿ ಹಣ ನೀಡಿದರೂ ವಿದ್ಯುತ್ ಪೂರೈಕೆ ಮಾಡದ ಸ್ಥಿತಿಗೆ ಸರ್ಕಾರ ತಲುಪಿದೆ. ಕೈಗಾರಿಕೆಗಳು ವಿದ್ಯುತ್ ಕೊರತೆಯಿಂದ ಉತ್ಪಾದನೆ ಕಡಿಮೆ ಮಾಡಿವೆ. ರೈತರ ಪಂಪ್‌ಸೆಟ್‌ಗಳಿಗೂ ವಿದ್ಯುತ್ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.