ಮೈಷುಗರ್‌ಗೆ ಅನುದಾನ ಕೊಡಲು ಸಿಎಂ ಒಪ್ಪಿಗೆ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

Issuance of Sugarcane Milling Consent Letter Mandya
Published on

ಮಂಡ್ಯ: ಪ್ರಸಕ್ತ ಸಾಲಿನಲ್ಲಿ ಮೈಷುಗರ್ ಕಾರ್ಖಾನೆ ಪ್ರಾರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ 25 ಕೋಟಿ ರೂ ಅನುದಾನ ನೀಡುವಂತೆ ಮನವಿ ಮಾಡಿದ್ದೇವೆ. ಅದಕ್ಕೆ ಸಿಎಂ ಒಪ್ಪಿಕೊಂಡಿದ್ದಾರೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ನಗರದ ಕಾವೇರಿ ಭವನದ ಶಾಸಕರ ಕಾರ್ಯಾಲಯದಲ್ಲಿ ರೈತರಿಗೆ ಕಬ್ಬು ಅರೆಯುವಿಕೆ ಒಪ್ಪಿಗೆ ಪತ್ರ ವಿತರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಳೆದ ಎರಡು ವರ್ಷದಿಂದ ರೈತರಿಗೆ ತೊಂದರೆ ಇಲ್ಲದೆ ರೀತಿ ಮೈಷುಗರ್ ಕಾರ್ಖಾನೆ ನಿರ್ವಹಣೆ ಮಾಡಲಾಗುತ್ತಿದೆ. ಕಾರ್ಖಾನೆ ನಷ್ಟದಲ್ಲಿದ್ದರೂ ರೈತರಿಗೆ ಹಣ ಹಾಗೂ ಬಾಕಿ ಬಿಡುಗಡೆ ಅನುದಾನ ಕೊಡಲಾಗಿದೆ. ಈ ಮೂಲಕ ರಾಜ್ಯಸರ್ಕಾರ ರೈತರಿಗೆ ಮಾತು ಕೊಟ್ಟ ರೀತಿ ನಡೆದು ಕೊಳ್ಳುತ್ತಿದೆ ಎಂದು ತಿಳಿಸಿದರು.

ಮೈಷುಗರ್ ಕಾರ್ಖಾನೆಯ 2025-26ನೇ ಸಾಲಿನ ರೈತರಿಗೆ ಒಪ್ಪಿಗೆ ಪತ್ರವನ್ನು ಮುಂಗಡವಾಗಿ ಮಂಡ್ಯ ವಿಧಾನಸಭಾ ಕ್ಷೇತ್ರದ ರೈತರಿಗೆ ಸಾಂಕೇತಿಕವಾಗಿ ವಿತರಣೆ ಮಾಡಲಾಗಿದೆ. ಒಪ್ಪಿಗೆ ಪತ್ರ ಪಡೆದ ರೈತರು ಸಾಲ ಪಡೆಯಲು ಮತ್ತಿತರ ಸೌಲಭ್ಯಕ್ಕೆ ಅನುಕೂಲವಾಗುತ್ತದೆ. ಜತೆಗೆ ರೈತರಿಗೂ ಕಬ್ಬು ಅರೆಯು ವುದು ಖಾತ್ರಿಯಾಗುತ್ತದೆ ಎಂದು ತಿಳಿಸಿದರು.

ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಮಾತನಾಡಿ, ಮಂಡ್ಯ ವಿಧಾನಸಭಾ ಕ್ಷೇತ್ರದ ರೈತರಿಗೆ ಮೈಷುಗರ್ ಒಪ್ಪಿಗೆ ಪತ್ರ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕೊತ್ತತ್ತಿ ಭಾಗದ ರೈತರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ದುದ್ದ ಹೋಬಳಿ ಭಾಗದ ರೈತರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ವಿತರಿಸಲಾಗುವುದು. ಕೋಲ್ಮನ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರವನ್ನು ಅಳವಡಿಸುವ ಮೂಲಕ ಮೈಸೂರು ಸಕ್ಕರೆ ಕಂಪನಿಯಿಂದ ರೈತರಿಗೆ ಒಪ್ಪಿಗೆ ಪತ್ರವನ್ನು ವಿತರಣೆ ಮಾಡಲಾಗುತ್ತಿದೆ. ಒಪ್ಪಿಗೆ ಪತ್ರ ಪಡೆದಂತಹ ರೈತರು ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕುಗಳಿಂದ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಒಪ್ಪಿಗೆ ಪತ್ರ ಕೊಡುವುದು ರೈತರ ಒಕ್ಕೊರಲ ಮನವಿಯಾಗಿತ್ತು. ಇದಕ್ಕೆ ಸ್ಪಂದಿಸುವ ಮೂಲಕ ಒಪ್ಪಿಗೆ ಪತ್ರ ಪಡೆದ ರೈತರು ಮುಂದಿನ ದಿನಗಳಲ್ಲಿ ಕಾರ್ಖಾನೆಗಳಿಂದ ಬರುವ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಕೆ.ರುದ್ರಪ್ಪ, ಕಾಂಗ್ರೆಸ್ ಮುಖಂಡ ಚಂದಗಾಲು ವಿಜಯಕುಮಾರ್, ಕೀಲಾರ ಚನ್ನೇಗೌಡ, ಕೃಷ್ಣೇಗೌಡ, ಕೀಲಾರ ಕೃಷ್ಣ, ಸಿದ್ದೇಗೌಡ ಸೇರಿದಂತೆ ಇತರರಿದ್ದರು. ಬರೋಬರಿ 12 ವರ್ಷದ ಬಳಿಕ ಒಪ್ಪಿಗೆ ಪತ್ರ ನೀಡುವ ಪ್ರಕ್ರಿಯೆಯಲ್ಲಿ ಮರುಚಾಲನೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net