ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

16 HANUR 5
Published on

ಚಾಮರಾಜನಗರ: ಸರ್ಕಾರದಿಂದ ದೊರೆಯುವ ಸಹಾಯ ಧನ ಪಡೆದುಕೊಂಡು ಆದಷ್ಟು ಬೇಗ ಮನೆ ಜತೆ ಶೌಚಗೃಹವನ್ನು ನಿರ್ಮಿಸಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.


ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಮಣಗಳ್ಳಿ, ಬಂಡಳ್ಳಿ ಹಾಗೂ ಶಾಗ್ಯ ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಸವ ವಸತಿ ಯೋಜನೆಯಡಿ ಮನೆ ಮಂಜೂರಾತಿ ಆದೇಶ ಪ್ರತಿ ವಿತರಿಸಿ ಮಾತನಾಡಿದರು.


ಪ್ರತಿ ಕುಟುಂಬಕ್ಕೆ ಸ್ವಂತ ಸೂರು ಹೊಂದಬೇಕು ಎಂಬ ಉದ್ದೇಶದಿಂದ ಸರ್ಕಾರ ವಿವಿಧ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಿದೆ. ಈ ದೆಸೆಯಲ್ಲಿ ಬಂಡಳ್ಳಿ ಗ್ರಾಪಂಗೆ 168, ಮಣಗಳ್ಳಿಗೆ 160 ಹಾಗೂ ಶಾಗ್ಯ ಗ್ರಾಪಂಗೆ 63 ಮನೆಗಳು ಮಂಜೂರಾಗಿದೆ. ಆದ್ದರಿಂದ ಆಯ್ಕೆಯಾಗಿರುವ ಫಲಾನುಭವಿಗಳು ನಿಗದಿತ ಅವಧಿಯೊಳಗೆ ಮನೆ ನಿರ್ಮಾಣ ಕಾಮಗಾರಿ ಆರಂಭಿಸಬೇಕು.

ಈ ಯೋಜನೆಯಡಿ ಜಿಪಿಎಸ್ ಮೂಲಕ ಅಡಿಪಾಯ, ಗೋಡೆ, ಛಾವಣಿ ಹಾಗೂ ಮನೆ ಪೂರ್ಣಗೊಂಡ 4 ಹಂತಗಳಲ್ಲಿ ಸರ್ಕಾರದಿಂದ ಸಹಾಯ ಧನ ದೊರೆಯಲಿದೆ. ಆದ್ದರಿಂದ ಇದರ ಪ್ರಯೋಜನ ಪಡೆದುಕೊಂಡು ಶೀಘ್ರ ಮನೆ ನಿರ್ಮಿಸಿಕೊಳ್ಳಬೇಕು. ನರೇಗಾ ಯೋಜನೆಯಡಿ ಅನುದಾನ ಪಡೆದು ಪ್ರತಿಯೊಬ್ಬರೂ ಶೌಚಗೃಹವನ್ನು ಹೊಂದಬೇಕು ಎಂದು ಸಲಹೆ ನೀಡಿದರು.


ತಾಪಂ ಇಒ ಉಮೇಶ್ ಮಾತನಾಡಿ, ಇದೀಗ ಬೇಸಿಗೆ ಝಳ ಹೆಚ್ಚುತ್ತಿರುವುದರಿಂದ ಮುಂದಿನ 2 ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಜನತೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಾಪಂ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಕೂಡಲೇ ದೂ: 08224- 200130 ಸಂಖ್ಯೆಗೆ ಕರೆ ಮಾಡಿ ಮಾಹಿತಿ ತಿಳಿಸಬಹುದು. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಪಂ ನೋಡಲ್ ಅಧಿಕಾರಿ ಸತೀಶ್, ಪಿಡಿಒಗಳಾದ ರಾಮು, ವಿಶ್ವನಾಥ್ ಹಾಗೂ ಗ್ರಾಪಂ ಜನಪ್ರತಿನಿಧಿಗಳು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net