

ರಾಯಚೂರು ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯ ವಿವಿಧ ಘಟಕಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸಬೇಕು. ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಮಹಾನಗರ ಪಾಲಿಕೆಯ ಆಯುಕ್ತ ಜುಬೀನ್ ಮೊಹಪಾತ್ರ ಹೇಳಿದರು.
ನಗರದ ಪಾಲಿಕೆ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಬುಧವಾರ ಸ್ವಚ್ಛ ಭಾರತ ಅಭಿಯಾನ 2.0 ಅಡಿ ಐಇಸಿ ಚಟುವಟಿಕೆಗಳ ಕುರಿತು ಸಮುದಾಯ ಸಂಚಾಲಕರ ಹುದ್ದೆಗೆ ಆಯ್ಕೆಯಾದ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಕಾರ್ಯಾದೇಶ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿ ನೀಡಿ ಮಾತನಾಡಿದರು. ಸಹಕಾರ ಸಂಘದ ಸದಸ್ಯರು ಸದಸ್ಯರೊಂದಿಗೆ ಕೆಲಸ ಮಾಡುವುದು ಸಾಮಾನ್ಯ ವಿಚಾರವಲ್ಲ. ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ, ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಪಾಲಿಕೆಯ ವಿವಿಧ ತೆರಿಗೆ ಅಚ್ಚುಕಟ್ಟಾಗಿ ವಸೂಲಿ ಮಾಡಬೇಕು. ಒಂದೊಂದು ರೂಪಾಯಿಯನ್ನು ಜೋಡಿಸಿ ದೊಡ್ಡ ಕೆಲಸಗಳನ್ನು ಪಾಲಿಕೆಯಿಂದ ಮಾಡಬಹುದಾಗಿದೆ ಎಂದರು.
ಪಾಲಿಕೆಯ ಅಭಿವೃದ್ಧಿ ವಿಷಯದಲ್ಲಿ ಸಹಕಾರ ಸಂಘದ ಸದಸ್ಯರ ಪಾತ್ರ ಮಹತ್ವದ್ದಾಗಿದೆ. ತಾವು ಶಿಕ್ಷಣವಂತರಾಗಿದ್ದು, ಕಂಪ್ಯೂಟರ್ ಜ್ಞಾನ ಪಡೆಯಬೇಕು. ಸರ್ಕಾರಿ ಸಿಬ್ಬಂದಿಯಅತೆ ಕೆಲಸ ಕಾರ್ಯಗಳನ್ನು ಮಾಡಬೇಕು. ಸಂಬಅಧಿಸಿದ ವಿಭಾಗದ ಮುಖ್ಯಸ್ಥರ ಸಲಹೆಗಳನ್ನು ಪಡೆದು ಸಮಾಜವನ್ನು ಬದಲಾವಣೆ ಮಾಡಲು ಶ್ರಮಿಸಬೇಕೆಂದರು.
ಪಾಲಿಕೆಯ ವಾರ್ಡ್ ಮಟ್ಟದ ವಿವರಗಳು ಮತ್ತು ಮೂಲಸೌಕರ್ಯಗಳ ಸಮೀಕ್ಷೆಯನ್ನು ನಡೆಸುವ ಮೂಲಕ ತಳಮಟ್ಟದ ಸಮೀಕ್ಷೆ ನಡೆಸಬೇಕು. ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಬೇಕು. ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯವನ್ನು ಉತ್ಪಾದಿಸುವಲ್ಲಿ ನಿಯಮಗಳ ಪಾಲನೆ, ಒಣ ಮತ್ತು ಹಸಿ ತ್ಯಾಜ್ಯದ ಸಂಸ್ಕರಣೆ ಮಾಡಬೇಕು. ಬಳಕೆದಾರರ ಶುಲ್ಕ ಸಂಗ್ರಹಣೆಗೆ ನಾಗರಿಕರನ್ನು ಸಂವೇದನಾಶೀಲರನ್ನಾಗಿಸಬೇಕು. ಕಸ ಬಿಸಾಡಲು ಆಸ್ಪದ ನೀಡುವಂತಹ ಸ್ಥಳಗಳಲ್ಲಿ ಅವಕಾಶ ಕೊಡಬಾರದು ಎಂದರು.
ನಂತರ ಸ್ವ-ಸಹಾಯ ಗುಂಪುಗಳ ಸದಸ್ಯರಿಂದ ಪಾಲಿಕೆಯ ಅಧ್ಯಕ್ಷರಿಗೆ ಹಾಗೂ ಆಯುಕ್ತರಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಪಾಲಿಕೆಯ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಉಪ ಆಯುಕ್ತೆ ಸಂತೋಷ ರಾಣಿ, ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಜೈಪಾಲ್ ರೆಡ್ಡಿ, ಪಾಲಿಕೆಯ ಸಂಘಟನಾ ಅಧಿಕಾರಿ ಕೃಷ್ಣ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.