ಗುಜರಿ ವಾಹನಕ್ಕೂ ಎಫ್​ಸಿ: ವಾಹನ ಪರಿಶೀಲಿಸದೆ ಫಿಟ್​ನೆಸ್ ಸರ್ಟಿಫಿಕೇಟ್ ವಿತರಣೆ

Old Vehicle FC
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ಸಂಚಾರಕ್ಕೆ ಯೋಗ್ಯವಲ್ಲದ ಹಾಗೂ ಸುರಕ್ಷತಾ ಕ್ರಮಗಳಿರದ ವಾಹನಗಳಿಗೂ ಕೆಲ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್​ಟಿಒ) ಫಿಟ್​ನೆಸ್ ಸರ್ಟಿಫಿಕೇಟ್ (ಎಫ್​ಸಿ- ಅರ್ಹತಾ ಪ್ರಮಾಣಪತ್ರ) ವಿತರಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಭೌತಿಕವಾಗಿ ವಾಹನ ಪರಿಶೀಲಿಸದೆ ಅರ್ಹತಾ ಪ್ರಮಾಣಪತ್ರ ಕೊಡುತ್ತಿರುವುದರಿಂದ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಅಕ್ರಮಕ್ಕೆ ಕಡಿವಾಣ ಹಾಕಲು ‘ಎಂ ವಾಹನ್’ ತಂತ್ರಾಂಶದಲ್ಲಿ ಜಿಯೋ ಫೆನ್ಸಿಂಗ್/ಜಿಯೋ ಟ್ಯಾಗಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆರ್​ಟಿಒಗಳು ಮತ್ತು ಬ್ರೇಕ್ ಇನ್​ಸ್ಪೆಕ್ಟರ್​ಗಳಿಂದ ಆಗ್ರಹ ವ್ಯಕ್ತವಾಗಿದೆ.

ಸದ್ಯದ ವ್ಯವಸ್ಥೆಯಲ್ಲಿ ವಾಹನವನ್ನು ಆರ್​ಟಿಒ ಕಚೇರಿಗೆ ತರಬೇಕು. ಅದನ್ನು ಬ್ರೇಕ್ ಇನ್​ಸ್ಪೆಕ್ಟರ್​ಗಳು ಪರಿಶೀಲನೆ ನಡೆಸಿ, ಮೋಟಾರು ವಾಹನ ಕಾಯ್ದೆಯಡಿ ರೂಪಿಸಿರುವ ಎಲ್ಲ ಸುರಕ್ಷತಾ ಕ್ರಮಗಳನ್ನು ವಾಹನದಲ್ಲಿ ಅನುಸರಿಸಲಾಗಿದೆ ಎಂದು ಖಚಿತವಾದ ನಂತರ ಅರ್ಹತಾ ಪ್ರಮಾಣಪತ್ರ ವಿತರಣೆಗೆ ಅನುಮತಿ ನೀಡಬೇಕು. ಆದರೆ, ಬೆಂಗಳೂರು ಸೇರಿ ಕೆಲ ಆರ್​ಟಿಒಗಳಲ್ಲಿ ಮಧ್ಯವರ್ತಿಗಳ ಹಾವಳಿಯಿಂದಾಗಿ ವಾಹನವನ್ನು ಭೌತಿಕವಾಗಿ ಕಚೇರಿಗೆ ತರದಿದ್ದರೂ ಎಫ್​ಸಿ ವಿತರಣೆಯಾಗುತ್ತಿದೆ. ರಾಜ್ಯದಲ್ಲಿ ರಸ್ತೆ ಅಪಘಾತಗಳು ಹೆಚ್ಚಲು ಎಫ್​ಸಿ ದಂಧೆಯೂ ಒಂದು ಕಾರಣ. ರಸ್ತೆಬದಿ ನಿಲ್ಲಿಸುವ ವಾಹನಗಳಿಗೆ ಹಿಂದಿನಿಂದ ಬಂದ ವಾಹನಗಳು ಡಿಕ್ಕಿಯಾಗಿ ಜೀವಗಳು ಹೋಗಿರುವ ಹಲವು ಪ್ರಕರಣಗಳು ವರದಿಯಾಗಿವೆ.

ವಾಹನಕ್ಕೆ ಕಡ್ಡಾಯವಾಗಿ ಇಂಡಿಕೇಟರ್, ರಿಫ್ಲೆಕ್ಟರ್​ಗಳನ್ನು ಹಾಕಿಸಿರಬೇಕು. ಆದರೆ, ಬಹುತೇಕ ವಾಹನಗಳಿಗೆ ಇರುವುದೇ ಇಲ್ಲ. ಇದರಿಂದಾಗಿಯೇ ರಾತ್ರಿ ವೇಳೆ ವಾಹನಗಳಿಗೆ ಮುಂದಿರುವ ವಾಹನಗಳು ಕಾಣದೆ ಅಪಘಾತಗಳಾಗುತ್ತಿವೆ. ನಿಯಮಬದ್ಧವಾಗಿ ವಾಹನ ಪರಿಶೀಲಿಸಿ, ಎಫ್​ಸಿ ಕೊಟ್ಟರೆ ಇಂತಹ ಅನಾಹುತಗಳಿಗೆ ಅವಕಾಶ ಇರುವುದಿಲ್ಲ ಎಂದು ಸಾರಿಗೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಾಣಿಜ್ಯ ಬಳಕೆಯ ಲಾರಿ, ಬಸ್ಸು, ಟೆಂಪೋಗೆ ಎಫ್​ಸಿ ಮಾಡಿಸಲು ಕಚೇರಿಗೆ ತರಲು ಡೀಸೆಲ್, ಚಾಲಕನ ವೇತನ, ಟೋಲ್ ಶುಲ್ಕ ಪಾವತಿಯ ಜತೆಗೆ ಇಡೀ ದಿನ ಕಚೇರಿಯಲ್ಲೇ ವಾಹನ ಇರಬೇಕು. ಇದರಿಂದಾಗಿ ಆ ದಿನದ ಆದಾಯವೂ ಖೋತಾ ಆಗುತ್ತೆ. ಜತೆಗೆ, ಹೊಗೆ ಜಾಸ್ತಿ ಬರುತ್ತೆ, ಇಂಡಿಕೇಟರ್ ಇಲ್ಲ, ರಿಫ್ಲೆಕ್ಟರ್ ಇಲ್ಲ, ಮಿರರ್ ಇಲ್ಲ ಎಂದು ಬ್ರೇಕ್ ಇನ್​ಸ್ಪೆಕ್ಟರ್ ಎಫ್​ಸಿಗೆ ಅನುಮತಿ ಕೊಡಲ್ಲ. ಅದೇ ಏಜೆಂಟ್​ಗಳ ಮೂಲಕ ವ್ಯವಹರಿಸಿ ಅವರು ಕೇಳಿದಷ್ಟು ಹಣ ಕೊಟ್ಟರೆ ವಾಹನವನ್ನು ಕಚೇರಿಗೆ ಕೊಂಡೊಯ್ಯುವುದೇ ಬೇಡ. ಇದರಿಂದ ಹಣ ಉಳಿತಾಯವಾಗುವುದಲ್ಲದೆ, ಅದೇ ದಿನ ಕೆಲಸ ಮುಗಿಯುತ್ತದೆ ಎಂಬ ಕಾರಣಕ್ಕೆ ಅಡ್ಡದಾರಿಯಲ್ಲಿ ಎಫ್​ಸಿ ಮಾಡಿಕೊಳ್ಳಲು ವಾಹನ ಮಾಲೀಕರು ಮುಂದಾಗುತ್ತಿದ್ದಾರೆ.

ಯೋಜನೆಗೆ ಎಳ್ಳುನೀರು!

ಎಫ್​ಸಿ ದಂಧೆ ನಿಯಂತ್ರಿಸುವ ಉದ್ದೇಶದಿಂದಲೇ ‘ಎಂ ವಾಹನ್’ನಲ್ಲಿ ಜಿಯೋ ಫೆನ್ಸಿಂಗ್ ವ್ಯವಸ್ಥೆ ಅನುಷ್ಠಾನಕ್ಕೆ ಸಾರಿಗೆ ಇಲಾಖೆ ನಿರ್ಧರಿಸಿತ್ತು. ದೇವನಹಳ್ಳಿ ಆರ್​ಟಿಒ ಕಚೇರಿಯಲ್ಲಿ ಈ ಯೋಜನೆಯನ್ನು 2022-23ರಲ್ಲಿ ಒಂದು ವರ್ಷ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಉತ್ತಮ ಯೋಜನೆಯಾದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಆರ್​ಟಿಒ ಕಚೇರಿಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿತ್ತು. ಆದರೆ, ಈ ವ್ಯವಸ್ಥೆ ಜಾರಿಯಾದರೆ ಎಫ್​ಸಿ ಕಳ್ಳಾಟಕ್ಕೆ ಬ್ರೇಕ್ ಬೀಳಲಿದೆ ಎಂದು ಮಧ್ಯವರ್ತಿಗಳು ಹಾಗೂ ಕೆಲ ಅಧಿಕಾರಿಗಳ ಅನುಕೂಲಕ್ಕಾಗಿ ಯೋಜನೆ ವಿಸ್ತರಿಸಲು ಸರ್ಕಾರ ಹಿಂದೇಟು ಹಾಕಿ ದೇವನಹಳ್ಳಿ ಕಚೇರಿಯಿಂದಲೂ ಯೋಜನೆ ಕೈಬಿಟ್ಟಿತ್ತು. ದಂಧೆಗೆ ಕಡಿವಾಣ ಹಾಕಲು ಮತ್ತೆ ಅನುಷ್ಠಾನಕ್ಕೆ ತರುವಂತೆ ಅಧಿಕಾರಿಗಳೇ ಸಾರಿಗೆ ಇಲಾಖೆಗೆ ಒತ್ತಾಯ ಮಾಡಿದ್ದಾರೆ.

ಹಲವು ರಾಜ್ಯಗಳಲ್ಲಿದೆ ಜಿಯೋ ಟ್ಯಾಗಿಂಗ್

ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ವಾಹನಗಳ ಎಫ್​ಸಿಗೆ ಜಿಯೋ ಫೆನ್ಸಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಅಖಿಲ ಭಾರತ ತಾಂತ್ರಿಕ ಅಧಿಕಾರಿಗಳ ಒಕ್ಕೂಟದ ಹೋರಾಟದ ಭಾಗವಾಗಿ ಕೇಂದ್ರ ಸರ್ಕಾರ ಜಿಯೋ ಟ್ಯಾಗಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದಕ್ಕೂ ಮುಂಚಿನಿಂದಲೇ ತಮಿಳುನಾಡಿನಲ್ಲಿ ಜಿಯೋ ಫೆನ್ಸಿಂಗ್ ವ್ಯವಸ್ಥೆ ಜಾರಿಯಲ್ಲಿತ್ತು.

ಏಜೆಂಟ್​ಗಳ ವಸೂಲಿ ಎಷ್ಟು?

* ಮಧ್ಯಮ ಅಥವಾ ಭಾರಿ ವಾಹನಕ್ಕೆ ಆಟೋಮ್ಯಾಟಿಕ್ ವ್ಯವಸ್ಥೆಯಲ್ಲಿ 1,000 ಹಾಗೂ ಮ್ಯಾನ್ಯುವಲ್​ನಲ್ಲಿ ಬರೀ 600 ರೂ. ಸರ್ಕಾರಿ ಶುಲ್ಕ ಇದೆ.

* ಎಫ್​ಸಿ ಕೊಡಲು ಮಾಲೀಕನ ಅಂತಸ್ತು ನೋಡಿ ಹಣ ನಿಗದಿಪಡಿಸುವ ಏಜೆಂಟ್​ಗಳು, ಸಾಮಾನ್ಯವಾಗಿ 10 ರಿಂದ 20 ಸಾವಿರ ರೂ.ವರೆಗೆ ವಸೂಲಿ ಮಾಡುತ್ತಾರೆ.

* ಮಾಲೀಕ ಶ್ರೀಮಂತನಾಗಿದ್ದರೆ 40 ರಿಂದ 50 ಸಾವಿರ ರೂ. ವರೆಗೆ ಮಧ್ಯವರ್ತಿಗಳು ಸುಲಿಗೆ ಮಾಡುತ್ತಾರೆ.

* ಬ್ರೇಕ್ ಇನ್​ಸ್ಪೆಕ್ಟರ್​ಗೆ 5 ಸಾವಿರ ರೂ.ವರೆಗೆ ಕೊಟ್ಟು, ಉಳಿದ ಅಷ್ಟೂ ಹಣವನ್ನು ಮಧ್ಯವರ್ತಿಯೇ ಜೇಬಿಗಿಳಿಸುತ್ತಾನೆ.

ದಿನಕ್ಕೆ 300 ವಾಹನಕ್ಕೆ ಎಫ್​ಸಿ!

ರಾಜ್ಯದ ಯಾವುದೇ ಆರ್​ಟಿಒದಲ್ಲೂ ವಾಹನಕ್ಕೆ ಎಫ್​ಸಿ ಮಾಡಿಸಲು ಅವಕಾಶ ಇದೆ. ಈ ಅವಕಾಶ ದುರ್ಬಳಕೆಯಾಗುತ್ತಿದ್ದು, ಕೆಲ ನಿರ್ದಿಷ್ಟ ಕಚೇರಿಗಳಲ್ಲಿ ಮಾತ್ರ ಅವ್ಯವಹಾರ ನಡೆಯುತ್ತಿದೆ. ಅದರಲ್ಲೂ ಬೆಂಗಳೂರಿನ ಎರಡ್ಮೂರು ಆರ್​ಟಿಒಗಳಲ್ಲಿ ಮಧ್ಯವರ್ತಿಗಳೇ ಎಫ್​ಸಿ ದಂಧೆ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಒಂದು ಕಚೇರಿಯಲ್ಲಿ ಪ್ರತಿನಿತ್ಯ 200 ರಿಂದ 300 ವಾಹನಗಳಿಗೆ ನಿಯಮಬಾಹಿರವಾಗಿ ಎಫ್​ಸಿ ಕೊಡಲಾಗುತ್ತಿದೆ. ವಾಹನ ನೋಡದೆಯೇ ಎಫ್​ಸಿ ಕೊಡುವಂತೆ ಮೋಟಾರು ವಾಹನ ಇನ್​ಸ್ಪೆಕ್ಟರ್​ಗಳನ್ನೇ ಬೆದರಿಸಿ, ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಎರಡು ಕಚೇರಿಗಳಿಗೆ ಜಿಯೋ ಟ್ಯಾಗಿಂಗ್ ಯೋಜನೆ ತರಲು ಎರಡು ವರ್ಷಗಳ ಹಿಂದೆಯೇ ಆಗಿನ ಸಾರಿಗೆ ಆಯುಕ್ತ ಶಿವಕುಮಾರ್ ಆದೇಶ ಹೊರಡಿಸಿದ್ದರು. ಆದರೆ, ಯೋಜನೆ ಜಾರಿಗೊಳಿಸಲು ಕೆಲವರು ಬಿಡಲಿಲ್ಲ ಎಂದು ಇಲಾಖೆ ಅಧಿಕಾರಿಗಳೇ ಅಸಮಾಧಾನ ವ್ಯಕ್ತಪಡಿಸುತ್ತಾರೆ.

15 ವರ್ಷದಿಂದ ಹೊಸ ನೇಮಕಾತಿ ನಡೆಯದೆ ಆರ್​ಟಿಒ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಇದೆ. ‘ಎಂ ವಾಹನ್ ಜಿಯೋ ಫೆನ್ಸಿಂಗ್’ ವ್ಯವಸ್ಥೆ ಅನುಷ್ಠಾನ ಗೊಳಿಸುವ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ.

| ರಾಮಲಿಂಗಾರೆಡ್ಡಿ ಸಾರಿಗೆ ಸಚಿವ

ಜಿಯೋ ಫೆನ್ಸಿಂಗ್ ವ್ಯವಸ್ಥೆಗೆ ಬ್ರೇಕ್ ಇನ್​ಸ್ಪೆಕ್ಟರ್​ಗಳಿಗೆ ಪ್ರತ್ಯೇಕ ಸಿಮ್ ಕಾರ್ಡ್ ನೆಟ್ವರ್ಕ್ ಅಗತ್ಯ. ಶೀಘ್ರದಲ್ಲೇ ಟ್ಯಾಬ್ ವಿತರಿಸಲಿದ್ದು, ನಂತರ ಈ ಬಗ್ಗೆ ಪರಿಶೀಲಿಸಲಾಗುತ್ತದೆ.

| ಸಿ. ಮಲ್ಲಿಕಾರ್ಜುನ, ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ

ಜಿಯೋ ಫೆನ್ಸಿಂಗ್...

* ಜಿಯೋ ಫೆನ್ಸಿಂಗ್ ವ್ಯವಸ್ಥೆಯಲ್ಲಿ ಎಂ ವಾಹನ್ ಆಪ್​ನಲ್ಲಿ ಎಫ್​ಸಿ ಗೆ ಬರುವ ವಾಹನದ ಫೋಟೋ ಅಪ್​ಲೋಡ್ ಮಾಡಬೇಕು.

* ಪ್ರತಿ ಆರ್​ಟಿಒ ಕಚೇರಿಗೆ ಎರಡು ಪಾಯಿಂಟ್ ಗುರುತಿಸಿ, ಅಲ್ಲಿ ಎಫ್​ಸಿ ಪರಿಶೀಲನೆಗೆ ಅವಕಾಶ ಸಿಗುತ್ತದೆ.

* ಬ್ರೇಕ್ ಇನ್​ಸ್ಪೆಕ್ಟರ್​ಗಳು ವಾಹನದ ನಾಲ್ಕೂ ಕಡೆಯ ಫೋಟೋ ತೆಗೆದು, ಅದನ್ನು ಆಪ್​ನಲ್ಲಿ ಅಪ್​ಲೋಡ್ ಮಾಡಬೇಕು.

* ಜಿಯೋ ಫೆನ್ಸಿಂಗ್ ವ್ಯವಸ್ಥೆಯಲ್ಲಿ ವಾಹನ 500 ಮೀ. ಅಂತರದಲ್ಲಿ ಇರಲೇಬೇಕು. ಇಲ್ಲದಿದ್ದರೆ ಫೋಟೋ ಅಪ್​ಲೋಡ್ ಆಗುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net