

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಮಹಾನಗರ ಪಾಲಿಕೆ ವಲಯ ಕಚೇರಿ 7ರಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜ ನಾಯ್ಕರ್, ವಲಯಾಧಿಕಾರಿ ಡಿಜಿಟಲ್ ಕೀ ಬಳಸಿ ನಕಲಿ ಮರಣ ಪ್ರಮಾಣ ಪತ್ರ ನೀಡಿದ್ದು, ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಲಯ ಕಚೇರಿಗೆ ಮರಣ ವರದಿ ಸ್ವೀಕೃತವಾಗದೆ, ಜನನ-ಮರಣ ವಿಷಯ ನಿರ್ವಾಹಕ, ಕಚೇರಿ ವ್ಯವಸ್ಥಾಪಕ, ವಲಯ ಆಯುಕ್ತರ ಅನುಮೋದನೆಯಿಲ್ಲದೆ, ಇ-ಜನ್ಮ ತಂತ್ರಾಂಶದಲ್ಲಿ ಅರ್ಜಿ ಸ್ವೀಕೃತವಾಗದೆ ಎರಡು ಮರಣ ಪ್ರಮಾಣ ಪತ್ರ ನೀಡಲಾಗಿದೆ. 2024ರ ಜೂನ್ 11ರಿಂದ ಅಕ್ಟೋಬರ್ 10ರವರೆಗೆ ನಾಗರಾಜ ನಾಯ್ಕರ್ ಈ ಕೃತ್ಯ ಎಸಗಿದ್ದಾರೆ. ಸುಳ್ಳು ದಾಖಲೆ ಸೃಷ್ಟಿಸಿ ಮರಣ ಪತ್ರ ನೀಡಿ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಸಹಾಯಕ ಆಯುಕ್ತ ಚಂದ್ರಶೇಖರ ಮಾಲಿಪಾಟೀಲ ದೂರಿನಲ್ಲಿ ವಿವರಿಸಿದ್ದಾರೆ.