

ಮಂಡ್ಯ: ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ವೈಚಾರಿಕ ಮನೋಭಾವಕ್ಕೆ ಹೆಚ್ಚು ಒತ್ತು ನೀಡಬೇಕು. ಅಂತೆಯೇ ವೈಜ್ಞಾನಿಕ ತಳಹದಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಇಸ್ರೋ ವಿಜ್ಞಾನಿ ಶ್ರೀನಾಥ್ ರತ್ನಕುಮಾರ್ ಸಲಹೆ ನೀಡಿದರು.
ನಗರದ ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ‘ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಇತ್ತೀಚಿನ ಪ್ರಗತಿಗಳು’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್.ಎಂ.ವಿಶ್ವೇಶ್ವರಯ್ಯ, ಎಚ್.ನರಸಿಂಹಯ್ಯ, ಪ್ರೊ.ಸಿ.ಎನ್.ರಾವ್, ಡಾ.ವಿಕ್ರಂ, ಎ.ಪಿ.ಜೆ ಅಬ್ದುಲ್ ಕಲಾಂ ಹಾಗೂ ಸತೀಶ್ ಇಸ್ರೋಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದೇ ರೀತಿ ಅವರು ಹಾಕಿರುವ ಬುನಾದಿಯನ್ನು ನಾವು ಮುಂದಿನ ದಿನಗಳಲ್ಲಿ ಅತ್ಯುತ್ತಮ ಸ್ಥಾನಕ್ಕೆ ಕರೆದೊಯ್ಯಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಂಡ್ಯ ವಿವಿ ಕುಲಪತಿ ಡಾ.ಪುಟ್ಟರಾಜು ಮಾತನಾಡಿ, ಲೆನ್ಸ್ ಟೆಕ್ನಾಲಜಿಯಲ್ಲಿ ಭಾರತಪ್ರಪಂಚದ 5ನೇ ದೇಶವಾಗಿ ಹೊರಹೊಮ್ಮಿದೆ. ಅಂತೆಯೇ ಯಶಸ್ವಿಯಾದ ಚಂದ್ರಯಾನ-3ರಿಂದ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಾಗಿದೆ ಎಂದರು.
ಮಂಡ್ಯ ವಿವಿ ರಿಜಿಸ್ಟರ್(ಆಡಳಿತ) ಆರ್.ಚಂದ್ರಯ್ಯ, ರಿಜಿಸ್ಟರ್(ಮೌಲ್ಯಮಾಪನ) ಡಾ.ರಂಗರಾಜು, ಮಾಜಿ ವಿಜ್ಞಾನಿ ಸಿ.ಡಿ.ಪ್ರಸಾದ್, ಡಾ.ಬಿ.ಕೆ ಸುರೇಶ, ಎಸ್.ಹಿರಿಯಣ್ಣ ಇತರರಿದ್ದರು.