ಐತಿಹಾಸಿಕ ಮೈಲುಗಲ್ಲು ನಿರ್ಮಿಸಿದ ಭಾರತ

dj hnl chandrayana
Published on

ಹೊನ್ನಾಳಿ: ಚಂದ್ರಯಾನ 3ರ ವಿಕ್ರಮ್ ರೋವರ್ ಇಳಿದಾಕ್ಷಣ ಚಂದ್ರಯಾನ 2ರ ನೋವು ಮರೆಸಿದೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಶ್ರೀಮಠದಲ್ಲಿ ವಿಜಯೋತ್ಸವ ಆಚರಿಸಿ ತಮ್ಮ ಸಂತಸವನ್ನು ವಿಜಯವಾಣಿಯೊಂದಿಗೆ ಹಂಚಿಕೊಂಡರು.

ಇಸ್ರೋ ವಿಜ್ಞಾನಿಗಳ ಸಾಧನೆಯಿಂದಾಗಿ ಚಂದ್ರಯಾನ 3 ಯಶಸ್ವಿ ಆಗಿದೆ. ಇಸ್ರೋ ವಿಜ್ಞಾನಿಗಳ ಈ ಐತಿಹಾಸಿಕ ಸಾಧನೆಗೆ ಇಡೀ ಭಾರತೀಯರೆಲ್ಲರೂ ಕುಣಿದು ಕುಪ್ಪಳಿಸುತ್ತಿದ್ದಾರೆ ಎಂದರು.

ವಿಶ್ವದ ಅನೇಕ ಶ್ರೀಮಂತ ರಾಷ್ಟ್ರಗಳು ನಾವೇ ಎಲ್ಲ ಸಾಧನೆ ಮಾಡುವುದು ಬೇರೆ ಯಾರೂ ಮಾಡುವುದಿಲ್ಲ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದರು, ಆದರೆ ಭಾರತದ ಈ ಸಾಧನೆಯಿಂದ ಬೆರಗಾಗಿ ಭಾರತದ ಕಡೆ ನೋಡುತ್ತಿದ್ದಾರೆ ಎಂದರು.

ಅಮೆರಿಕಾ, ಚೀನಾ, ರಷ್ಯಾ ಬಳಿಕ ಇದೀಗ ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಇಂತಹ ಸಂತಸದ ಕ್ಷಣವನ್ನು ನಾವೆಲ್ಲರೂ ಎಂದಿಗೂ ಮರೆಯದಂತಹ ಮಧುರ ಕ್ಷಣ ಎಂದು ಶಾಸಕ ಡಿ.ಜಿ.ಶಾಂತನಗೌಡ ವಿಜಯವಾಣಿ ಜತೆ ಸಂತಸ ಹಂಚಿಕೊಂಡರು.

ಬಾಹ್ಯಾಕಾಶದಲ್ಲಿ ಭಾರತ ಐತಿಹಾಸಿಕ ಮೈಲುಗಲ್ಲು ನಿರ್ಮಿಸಿದೆ. ಅಲ್ಲದೆ ಎಲ್ಲ ಕ್ಷೇತ್ರದಲ್ಲೂ ಭಾರತ ಸಾಧನೆ ಮಾಡುತ್ತ ಬರುತ್ತಿದೆ.

ಅಮೃತ ಮಹೋತ್ಸವದಲ್ಲಿ ಇಂತಹ ಅದ್ಭುತ ಸಾಧನೆ ಮಾಡಿರುವುದರಿಂದ ನಿಜಕ್ಕೂ ಭಾರತ ಬಲಿಷ್ಠ ರಾಷ್ಟ್ರ ಎನ್ನುವುದು ಇಡೀ ವಿಶ್ವಕ್ಕೆ ತಿಳಿದಂತಾಗಿದೆ ಎಂದರು.

ಚಂದ್ರನ ದಕ್ಷಿಣ ದ್ರುವದ ಮೇಲೆ ರೋವರ್ ಅನ್ನು ಇಳಿಸಿದ ಮೊದಲ ದೇಶ ನಮ್ಮ ಹೆಮ್ಮೆಯ ಭಾರತ, ಇಂತಹ ಅವಿಸ್ಮರಣಿಯ ಕ್ಷಣಕ್ಕೆ ನಾವೆಲ್ಲರೂ

ಸಾಕ್ಷಿಯಾಗಿದ್ದು ನಮ್ಮೆಲ್ಲರ ಸೌಭಾಗ್ಯ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಪತ್ರಿಕೆಯೊಂದಿಗೆ ಸಂತಸ ಕ್ಷಣ ಹಂಚಿಕೊಂಡಿದ್ದಾರೆ.

ಚಂದ್ರನ ಅಂಗಳದಲ್ಲಿ ಇಸ್ರೋ ಐತಿಹಾಸಿಕ ಸಾಧನೆ ಮಾಡಿದೆ, ಇಸ್ರೋ ವಿಜ್ಞಾನಿಗಳಿಗೆ ತುಂಬು ಹೃದಯದಿಂದ ಅಭಿನಂದನೆಗಳು ಎಂದ ಅವರು,

ಅಮೆರಿಕಾ,ರಷ್ಯಾ,ಚೀನಾ ದೇಶಗಳನ್ನು ಹಿಮ್ಮೆಟ್ಟಿಸಿ ಸಾಧನೆ ಮಾಡಿರುವ ಭಾರತ ವಿಶ್ವಗುರು ಎಂದು ಮತ್ತೊಮೆ ನಮ್ಮ ವಿಜ್ಞಾನಿಗಳು ಸಾಧಿಸಿ ತೋರಿಸಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net