

ಮೈಸೂರು: ಅಮೆರಿಕದ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ (ಜಿಪಿಎಸ್)ಗೆ ಪರ್ಯಾಯವಾದ ಅಂತಾರಾಷ್ಟ್ರೀಯ ಮಟ್ಟದ ನ್ಯಾವಿಗೇಷನ್ ವ್ಯವಸ್ಥೆಯನ್ನು ಭಾರತ ಅಭಿವೃದ್ಧಿ ಪಡಿಸುವ ಹಾದಿಯಲ್ಲಿ ಇದೆ ಎಂದು ಇಸ್ರೋದ ನ್ಯಾವಿಗೇಷನ್ ಸಿಸ್ಟಮ್ಸ್ ನ ಸಮೂಹ ನಿರ್ದೇಶಕಿ ಎಂ.ವಿ. ರೂಪಾ ಹೇಳಿದರು.
ನಗರದ ನಾರಾಯಯಣಶಾಸ್ತ್ರಿ ರಸ್ತೆಯ ದಿ ಅನಾಥಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತ ನಾಡಿ, ಪ್ರಸ್ತುತ ಇಸ್ರೋ ನಮ್ಮ ದೇಶಕ್ಕೆ ಸೀಮಿತವಾದ ನ್ಯಾವಿಗೇಷನ್ ಸ್ಟಿಸ್ಟಮ್ ‘ನಾವಿಕ್’ಅನ್ನು ಅಭಿವೃದ್ಧಿ ಪಡಿಸಿದೆ. ಇದು ಈಗಾಗಲೇ ಎಲ್ಲರ ಮೊಬೈಲ್ನಲ್ಲಿ ಬಳಕೆಗೆ ಲಭ್ಯವಿದೆ. ಆದರೆ, ಈ ‘ನಾವಿಕ್’ ನ್ಯಾವಿಗೇಷನ್ ನಮ್ಮ ದೇಶ ಹಾಗೂ ನೆರೆಯ ದೇಶಗಳ ಕೆಲವು ಭಾಗಗಳಿಗೆ ಮಾತ್ರ ಸೀಮಿತವಾಗಿದೆ. ಭಾರತದಿಂದ ಹೊರಗೆ ಹೋದರೆ ಇದು ಕಾರ್ಯನಿರ್ವಹಿಸುವುದಿಲ್ಲ. ಹಾಗಾಗಿ ಜಾಗತಿಕ ಬಳಕೆಗೆ ಹೊಸ ನ್ಯಾವಿಗೇಷನ್ ಅಭಿವೃವೃದ್ಧಿ ಪಡಿಸಲಾಗುತ್ತಿದೆ ಎಂದು ಹೇಳಿದರು.
ನಮಗೆ ಪ್ರತ್ಯೇಕವಾದ ನ್ಯಾವಿಗೇಷನ್ ವ್ಯವಸ್ಥೆ ಅತ್ಯಗತ್ಯ ಎಂಬುದು ಮನವರಿಕೆಯಾಗಿದ್ದು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ. ಆ ಸಂದರ್ಭದಲ್ಲಿ ನಾವು ಜಿಪಿಎಸ್ ಮೇಲೆ ಸಂಪೂರ್ಣ ಅವಲಂಬನೆ ಹೊಂದಿದ್ದೆವು. ಯುದ್ಧದ ಸಂದರ್ಭದಲ್ಲಿ ಅಮೆರಿಕದವರು ನಮಗೆ ಬೇಕಂತಲೇ ಜಿಪಿಎಸ್ ವ್ಯವಸ್ಥೆಯನ್ನು ಸರಿಯಾಗಿ ನೀಡಲಿಲ್ಲ. ಜಿಪಿಎಸ್ ಸ್ಥಗಿತಗೊಳಿಸಿದ್ದರಿಂದ ಯುದ್ಧ ವಿಮಾನಗಳ ಹಾರಾಟಕ್ಕೆ ಸಮಸ್ಯೆ ಎದುರಾಯಿತು. ಹಾಗಾಗಿ ಆ ಸಂದರ್ಭ ನಮಗೆ ಸಾಕಷ್ಟು ಸಮಸ್ಯೆ ಎದುರಾಯಿತು. ನಂತರ ನಮ್ಮದೇ ಆದ ನ್ಯಾವಿಗೇಷನ್ ವ್ಯವಸ್ಥೆ ಅಭಿವೃದ್ಧಿ ಪಡಿಸುವ ಜಾವಬ್ದಾರಿಯನ್ನು ಕೇಂದ್ರ ಸರ್ಕಾರ ಇಸ್ರೋಗೆ ನೀಡಿತು ಎಂದರು.
ಜಾಗತಿಕವಾಗಿ ಬಳಸುವ ನ್ಯಾವಿಗೇಷನ್ ಅಭಿವೃದ್ಧಿ ಪಡಿಸಲು 24 ಉಪಗ್ರಹಗಳನ್ನು ಉಡ್ಡಾವಣೆ ಮಾಡಬೇಕಾಗುತ್ತದೆ. ಹೀಗಾಗಿ ದೇಶದ ವ್ಯಾಪ್ತಿಯೊಳಗೆ ಮಾತ್ರ ಬಳಕೆಗೆ ಸೀಮಿತವಾಗಿ ನ್ಯಾವಿಗೇಷನ್ ಅಭಿವೃದ್ಧಿ ಪಡಿಸಲು 7 ಉಪಗ್ರಹಗಳನ್ನು ಉಡ್ಡಾವಣೆ ಮಾಡಿ ಯಶಸ್ವಿಯಾಗಿ ‘ನಾವಿಕ್’ ನ್ಯಾವಿಗೇಷನ್ಅನ್ನು ಬಳಕೆಗೆ ತಂದಿದ್ದೇವೆ. ನಮ್ಮ ಮುಂದಿನ ಗುರಿ ಜಾಗತಿಕ ಬಳಕೆಯ ನ್ಯಾವಿಗೇಷನ್ ಅಭಿವೃದ್ಧಿ ಪಡಿಸುವುದಾಗಿದೆ. ಪ್ರಸ್ತುತ ಇಸ್ರೋದ ಎಲ್ಲ ಕಾರ್ಯಚಟುವಟಿಕೆಗಳು ಜಿಪಿಎಸ್ನಿಂದ ಮುಕ್ತವಾಗಿದ್ದು, ನಮ್ಮದೇ ಆದ ಸ್ವಂತ ವ್ಯವಸ್ಥೆಯನ್ನು ಬಳಸುತ್ತಿದ್ದೇವೆ ಎಂದರು.
ಅಮೆರಿಕದವರು ಮಿಲಿಟರಿ ಉದ್ದೇಶಕೋಸ್ಕರ ಜಿಪಿಎಸ್ಅನ್ನು ಅಭಿವೃದ್ಧಿ ಪಡಿಸಿ ನಂತರ ಸಾರ್ವಜನಿಕ ಸೇವೆಗೂ ಜಾಗತಿಕವಾಗಿ ನೀಡಿದರು. ಇದೇ ರೀತಿ ರಷ್ಯಾದವರು ಗ್ಲೋನಾಸ್, ಯೂರೋಪ್ನವರು ಗೆಲಿಲಿಯೋ, ಚೀನಾದವರು ಬೈಡು ನ್ಯಾವಿಗೇಷನ್ ಸಿಸ್ಟಂ ಅನ್ನು ಅಭಿವೃದ್ಧಿ ಪಡಿಸಿದೆ. ಭಾರತ, ಜಪಾನ್ನ ನ್ಯಾವಿಗೇಷನ್ ಪ್ರಾದೇಶಿಕ ಮಟ್ಟಕ್ಕೆ ಸೀಮಿತವಾಗಿದೆ. ನ್ಯಾವಿಗೇಷನ್ ಅಭಿವೃದ್ಧಿ ಪಡಿಸಲು ಉಡ್ಡಾವಣೆ ಮಾಡುವ ಉಪಗ್ರಹಗಳಿಗೆ ಬಳಸುವ ಗಡಿಯಾರ ತಯಾರಿಕೆಗೆ ಕೋಟ್ಯಾಂತರ ರೂ.ಗಳ ಅವಶ್ಯಕತೆ ಇದೆ. ಈ ಹಿಂದೆ ನಾವು ವಿದೇಶದಿಂದ ನಾವು ಗಡಿಯಾರವನ್ನು ತರಿಸಿಕೊಳ್ಳುತ್ತಿದ್ದೆವು. ಆದರೆ, ಇದೀಗ ನಾವೇ ಅಭಿವೃದ್ಧಿ ಪಡಿಸಿದ್ದೇವೆ ಎಂದು ಹೇಳಿದರು.
ಪ್ರಸ್ತುತ ನ್ಯಾವಿಗೇಷನ್ ಇಲ್ಲದೆ ಹೋದರೆ ಜಗತ್ತು ಸ್ತಬ್ಧವಾಗಿ ಹೋಗುತ್ತದೆ ವಿಮಾನ, ಟ್ಯಾಕ್ಸಿ ಸೇವೆ, ರೈಲ್ವೆ ಸೇವೆ ಸೇರಿದಂತೆ ನ್ಯಾವಿಗೇಷನ್ ಅವಲಂಬಿಸಿರುವ ಎಲ್ಲ ಕ್ಷೇತ್ರಗಳಲ್ಲಿ ಸೇವೆ ಸ್ಥಗಿತಗೊಳ್ಳುತ್ತದೆ. ಹಾಗಾಗಿ ನ್ಯಾವಿಗೇಷನ್ ಅತ್ಯಂತ ಮುಖ್ಯವಾದದ್ದು. ನಾವು ಅಭಿವೃದ್ಧಿಪಡಿಸಿರುವ ನಾವಿಕ್ ನ್ಯಾವಿಗೇಷನ್ ಜಿಪಿಎಸ್ಗಿಂತ ಅತ್ಯುತ್ತಮವಾದ ನಿರ್ದಿಷ್ಟವಾದ ಮಾಹಿತಿ ನೀಡುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ದಿ ಅನಾಥಾಲಯದ ಅಧ್ಯಕ್ಷ ಸಿ.ವಿ. ಗೋಪಿನಾಥ್, ಉಪಾಧ್ಯಕ್ಷ ಎನ್.ವಿ. ದಿನೇಶ್, ಕಾರ್ಯದರ್ಶಿ ಎಚ್. ಅಶ್ವಥ್ ನಾರಾಯಣ ಇದ್ದರು.