2035 ವೇಳೆಗೆ ಸ್ವಂತ ಸ್ಪೇಸ್ ಸ್ಟೇಷನ್, 2047 ಕ್ಕೆ ಚಂದ್ರಯಾನ; ವಿದ್ಯಾರ್ಥಿಗಳೊಂದಿಗೆ ಇಸ್ರೋ ಪೂರ್ವ ಅಧ್ಯಕ್ಷ ಡಾ.ಎ.ಎಸ್ ಕಿರಣ್ ಸಂವಾದ

ISRO (4)
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) 2035 ವೇಳೆಗೆ ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣ (ಸ್ಪೇಸ್ ಸ್ಟೇಷನ್) ಸ್ಥಾಪನೆ ಹಾಗೂ ದೇಶವು ಸ್ವಾತಂತ್ರೊೃೀತ್ಸವದ 100 ನೇ ವರ್ಷಾಚರಣೆಯ ಸಂದರ್ಭ 2047 ರಲ್ಲಿ ಮಾನವ ಸಹಿತ ಚಂದ್ರಯಾನದ ಗುರಿಯನ್ನು ಇರಿಸಿಕೊಂಡಿದೆ ಎಂದು ಸಂಸ್ಥೆಯ ಪೂರ್ವ ಅಧ್ಯಕ್ಷ ಡಾ.ಎ.ಎಸ್ ಕಿರಣ್ ಕುಮಾರ್ ಹೇಳಿದರು.

ರಾಮಕೃಷ್ಣ ಮಿಷನ್ ಮಂಗಳೂರು ಮತ್ತು ಸಮತಾ ಮಹಿಳಾ ಬಳಗ ಸಹಯೋಗದಲ್ಲಿ ನಗರದ ಮಠದ ಸಭಾಂಗಣದಲ್ಲಿ ‘ಭವಿಷ್ಯದ ಬೆಳಕು ಮತ್ತು ಇಸ್ರೋ ಪರಂಪರೆ’ ವಿಷಯದ ಕುರಿತು ಭಾನುವಾರ ಆಯೋಜಿಸಿದ ಸಮಾರಂಭದಲ್ಲಿ ಅವರು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.

ಜಗತ್ತಿನ ಇತರ ದೇಶಗಳು ಬಾಹ್ಯಾಕಾಶ ಚಟುವಟಿಕೆಗಳನ್ನು ಮಿಲಿಟರಿ ಉದ್ದೇಶಗಳಿಗಾಗಿ ಬಳಸಿದರೆ, ಭಾರತ ಮಾತ್ರ ಮುಖ್ಯವಾಗಿ ಮಿಲಿಟರಿಯೇತರ ಉದ್ದೇಶಗಳಿಗಾಗಿಯೇ ಆರಂಭಿಸಿತು. 1957 ರಲ್ಲಿ ಪ್ರಥಮ ಬಾರಿಗೆ ರಷ್ಯಾವು ಸ್ಪುಟ್ನಿಕ್ ಅನ್ನು ಲಾಂಚ್ ಮಾಡಿತು. ಆ ವೇಳೆಗೆ ಭಾರತ ಸ್ವಾತಂತ್ರೃ ಪಡೆದು ಕೇವಲ 10 ವರ್ಷಗಳಾಗಿದ್ದವು. ನೂರಾರು ವರ್ಷಗಳಿಂದ ಪರಕೀಯರ ಆಳ್ವಿಕೆಯಲ್ಲಿ ಕಳೆದಿದ್ದ ಭಾರತದಲ್ಲಿ ಎಲ್ಲ ಜನರಿಗೆ ಆಶ್ರಯ, ವಸತಿ ಸಹಿತ ಮೂಲಭೂತ ಆವಶ್ಯಕತೆಗಳನ್ನು ಪೂರೈಸುವುದೇ ದೊಡ್ಡ ಸವಾಲಾಗಿತ್ತು. ಇಂತಹ ಸಂದರ್ಭದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆಯೇ ಎನ್ನುವ ಪ್ರಶ್ನೆ ಸಹಜವಾಗಿಯೇ ಹಲವರಲ್ಲಿ ಇತ್ತು ಎಂದು ಅವರು ಹೇಳಿದರು.

ಇಂದು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದ್ದು, ಕೃಷಿ, ಮೀನುಗಾರಿಕೆ, ಕೈಗಾರಿಕೆ, ಸಹಿತ ದೇಶದ ಒಟ್ಟು ಅಭಿವೃದ್ಧಿಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಕೊಡುಗೆ ಅನನ್ಯವಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ಣಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ಸುಮನಾ ಘಾಟೆ ಅವರು, ಮಠದಲ್ಲಿ ಇಂದು ಆಧ್ಯಾತ್ಮ ಹಾಗೂ ವಿಜ್ಞಾನ ಸಂಗಮವಾಗುತ್ತಿದೆ. ಇವೆರಡು ಕ್ಲಿಷ್ಟಕರ ಕ್ಷೇತ್ರಗಳಾಗಿದ್ದು, ಉಭಯ ಕ್ಷೇತ್ರಗಳ ಗುರು ಸೃಷ್ಟಿಯ ರಹಸ್ಯ ತಿಳಿಯುವುದು ಮತ್ತು ಮಾನವನ ಆತ್ಮದ ಕಲ್ಯಾಣವಾಗಿದೆ ಎಂದು ಹೇಳಿದರು.

ದೇಶದ ಅತ್ಯುನ್ನತ ಸಂಸ್ಥೆಗಳಲ್ಲಿ ಒಂದಾಗಿರುವ ಇಸ್ರೋ ಮಾಜಿ ಅಧ್ಯಕ್ಷರ ಜತೆ ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಿರುವ ಆಯೋಜಕರನ್ನು ಅಭಿನಂದಿಸಿದ ಅವರು, ಎತ್ತರದ ಆಲೋಚನೆಗಳು, ಉನ್ನತ ಸಾಧನೆಗೆ ಪ್ರೇರಣೆ ಪಡೆಯಲು ಕಾರ್ಯಕ್ರಮ ಅವಕಾಶ ಒದಗಿಸಲಿ ಎಂದು ಹಾರೈಸಿದರು.

ಆಶಯ ಭಾಷಣ ನೆರವೇರಿಸಿದ ರಾಮಕೃಷ್ಣ ಮಿಷನ್ ಮಂಗಳೂರು ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜೀ ಅವರು, ರಾಮಕೃಷ್ಣ ಮಿಷನ್ 75 ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಯುವಜನರನ್ನು ಗಮನದಲ್ಲಿಟ್ಟುಕೊಂಡು ಶ್ರದ್ಧಾ, ಮೇಧ ಸಹಿತ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸಮತಾ ಮಹಿಳಾ ಬಳಗ ಸಹಯೋಗದಲ್ಲಿ ಯೋಜಿಸಿರುವ ಇಸ್ರೋ ಪೂರ್ವ ಅಧ್ಯಕ್ಷರ ಜತೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಕೂಡ ಇದರ ಭಾಗವಾಗಿದೆ ಎಂದರು.

ಇಸ್ರೋ ಲಾಂಚ್ ವೆಹಿಕಲ್ ಫ್ರೋಗ್ರಾಂ ಆಫೀಸ್ ಮಾಜಿ ನಿರ್ದೇಶಕ ಡಾ.ಎಂ.ಎಂ ನಾಯಕ್, ಸಮತಾ ಮಹಿಳಾ ಬಳಗದ ಅಧ್ಯಕ್ಷೆ ಕಾತ್ಯಾಯಿನಿ ಭಿಡೆ ಅಧ್ಯಕ್ಷತೆ ವಹಿಸಿದ್ದರು. ಗೌರವ ಅಧ್ಯಕ್ಷೆ ವಿಜಯಲಕ್ಷ್ಮೀ ರಾವ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮುಖ್ಯ ಅತಿಥಿಗಳಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net