ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಣೆ: ವಸ್ತುಪ್ರದರ್ಶನ, ಸಾವಿರಾರು ವಿದ್ಯಾರ್ಥಿಗಳು ಭಾಗಿ

09GDG02
Published on

‘ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಫುಲ ಅವಕಾಶ: ಆರ್‌.ವಿ.ನಾಡಗೌಡ

ಗದಗ: ‘ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೇರಳ ಅವಕಾಶಗಳಿವೆ. ಸದ್ಯ ಬಾಹ್ಯಾಕಾಶ ಉದ್ಯಮ ₹40 ಲಕ್ಷ ಕೋಟಿಗಳಷ್ಟಿದ್ದು, ಇದರಲ್ಲಿ ಭಾರತದ ಪಾಲು ಶೇ 2ರಷ್ಟು ಮಾತ್ರ’ ಎಂದು ಇಸ್ರೊ ವಿಜ್ಞಾನಿ ಆರ್‌.ವಿ.ನಾಡಗೌಡ ತಿಳಿಸಿದರು. 

ಇಸ್ರೊದ ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರವು (ಎಚ್‌ಎಸ್‌ಎಫ್‌ಸಿ) ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ ಪಂಡಿತ್‌ ಭೀಮಸೇನ್‌ ಜೋಶಿ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಮಾತನಾಡಿದರು. 

‘ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 650 ಕೈಗಾರಿಕೆಗಳು ತೊಡಗಿಸಿಕೊಂಡಿವೆ. ಇವೆಲ್ಲವೂ ಇಸ್ರೊ ಸಂಸ್ಥೆಯನ್ನೇ ಅವಲಂಬಿಸಿವೆ. ಆದರೆ, ಅವಕಾಶಗಳು ವಿಫುಲವಾಗಿರುವುದರಿಂದ ಯುವಜನರು ಬಾಹ್ಯಾಕಾಶ ಕ್ಷೇತ್ರದಲ್ಲಿ ಆಸಕ್ತಿ ತಳೆದು ಇದರ ಸದುಯೋಗ ಪಡೆದರೆ ದೇಶ ಅಭಿವೃದ್ಧಿ ಸಾಧಿಸುತ್ತದೆ’ ಎಂದರು.

‘ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡಲು ಎಲ್ಲ ಕ್ಷೇತ್ರಗಳ ಪರಿಣತಿ ಬೇಕು. ಹಾಗಾಗಿ, ಯಾರು ಯಾವ ಕೆಲಸ ಮಾಡುತ್ತಿರೋ ಅದರಲ್ಲಿ ಶ್ರೇಷ್ಠತೆ ಸಾಧಿಸಬೇಕು. ಹೊಸ ಹೊಸ ಆವಿಷ್ಕಾರಗಳು ನಿರಂತರವಾಗಿ ಆಗಬೇಕು. ಆಗಷ್ಟೇ ಭಾರತ ಬಲಿಷ್ಠ ದೇಶ ಎಂಬುದು ಜಗತ್ತಿಗೆ ಗೊತ್ತಾಗುತ್ತದೆ’ ಎಂದು ಹೇಳಿದರು. 

ಇಸ್ರೊ ಮಾಜಿ ಅಧ್ಯಕ್ಷ  ಎ.ಎಸ್‌.ಕಿರಣ್‌ ಕುಮಾರ್‌ ಮಾತನಾಡಿ, ‘ಓದಲು ಬರೆಯಲು ಬರದ ಅನಕ್ಷರಸ್ಥ ವ್ಯಕ್ತಿ ಕೂಡ ತನ್ನ ದೈನಂದಿನ ಉದ್ಯಮವನ್ನು ಸುಸೂತ್ರವಾಗಿ ನಡೆಸಲು ಬಾಹ್ಯಾಕಾಶ ವಿಜ್ಞಾನ ನೆರವಾಗಿದೆ’ ಎಂದು ಹೇಳಿದರು. 

‘ಬಾಹ್ಯಾಕಾಶ ವಿಜ್ಞಾನದಿಂದ ಯಾವ ಜಾಗದಲ್ಲಿ ಸೈಕ್ಲೋನ್‌ ಬರುತ್ತದೆ, ಯಾವಾಗ ಬರುತ್ತದೆ ಎಂಬುದನ್ನು ಮೊದಲೇ ತಿಳಿದುಕೊಳ್ಳಬಹುದಾಗಿದೆ. ಇದರಿಂದ ಸಾವಿರಾರು ಜನರ ಜೀವರಕ್ಷಣೆ ಸಾಧ್ಯವಾಗಿದೆ. ಅದೇರೀತಿ, ಉಪಗ್ರಹಗಳ ನೆರವಿನಿಂದ ಮೀನಿನ ಆಹಾರ ಸರಪಳಿ ಹುಡುಕಿ ಯಾವ ಜಾಗದಲ್ಲಿ ಮೀನು ಸಿಗುತ್ತದೆ ಎಂಬುದನ್ನು ನಿಖರವಾಗಿ ತಿಳಿಸಿಕೊಡಬಹುದಾಗಿದೆ. ನಮ್ಮ ದೇಶದಲ್ಲಿ 7500 ಕಿ.ಮೀ. ಕರಾವಳಿ ಪ್ರದೇಶ ಇದ್ದು, ಲಕ್ಷಾಂತರ ಮೀನುಗಾರರು ಇದ್ದಾರೆ. ಬಾಹ್ಯಾಕಾಶ ವಿಜ್ಞಾನದಿಂದ ವರ್ಷಕ್ಕೆ ₹15 ಸಾವಿರ ಕೋಟಿ ಇಂಧನ ವೆಚ್ಚ ಕಡಿಮೆ ಆಗಿದೆ. ಅದೇರೀತಿ, ನಾವಿಕ್‌ ತಂತ್ರಜ್ಞಾನದಿಂದ ಅವರಿಗೆ ಸಾಕಷ್ಟು ಅನುಕೂಲ ಆಗಿದೆ’ ಎಂದು ತಿಳಿಸಿದರು. 

‘ಪ್ರಪಂಚದಲ್ಲಿ ಭಾರತ ಮಾತ್ರ ಬಾಹ್ಯಾಕಾಶ ವಿಜ್ಞಾನವನ್ನು ಮಿಲಿಟರಿಯೇತರ ಉದ್ದೇಶಕ್ಕೆ ಪ್ರಾರಂಭಿಸಿತು. ಆದರೆ, ಉಳಿದೆಲ್ಲ ರಾಷ್ಟ್ರಗಳು ತಮ್ಮ ಮಿಲಿಟರಿ ಸಾಮರ್ಥ್ಯ ವೃದ್ಧಿಗಾಗಿ ಬಾಹ್ಯಾಕಾಶ ಕೆಲಸ ಶುರು ಮಾಡಿದವು’ ಎಂದು ಹೇಳಿದರು. 

‘ಬಾಹ್ಯಾಕಾಶ ವಿಜ್ಞಾನ ತಂತ್ರಜ್ಞಾನ ಕ್ಷೇತ್ರ ಬೆಳೆಯಬೇಕಾದರೆ ಸ್ಪೇಸ್‌ ಟೂರಿಸಂ, ಸ್ಪೇಸ್‌ ಅಡ್ವೆಂಚರ್‌ ಚಟುವಟಿಕೆಗಳು ಸೇರಿದಂತೆ ಹೊಸ ಆವಿಷ್ಕಾರಗಳು ಆಗಬೇಕಿದೆ. ಅದಕ್ಕಾಗಿ ಯುವಜನರು ಬಾಹ್ಯಾಕಾಶ ವಿಜ್ಞಾನದತ್ತ ಹೆಚ್ಚಿನ ಒಲವು ಬೆಳೆಸಿಕೊಂಡು ಇತರರು ಈವರೆಗೆ ಮಾಡದ ಆವಿಷ್ಕಾರಗಳನ್ನು ಮಾಡಬೇಕಿದೆ’ ಎಂದು ತಿಳಿಸಿದರು. 

ಇಸ್ರೊದ ಯು.ಆರ್‌.ರಾವ್‌. ಸ್ಯಾಟಲೈಟ್‌ ಸೆಂಟರ್‌ನ ನಿರ್ದೇಶಕ ಎಂ.ಶಂಕರನ್‌ ಮಾತನಾಡಿ, ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದ ಮಾದರಿಯಲ್ಲಿ ಆಚರಿಸಬೇಕು’ ಎಂದು ತಿಳಿಸಿದರು. 

‘ಚಂದ್ರಯಾನ–3 ಯಶಸ್ಸಿನ ನೆನಪಿನಲ್ಲಿ ಬಾಹ್ಯಾಕಾಶ ದಿನ ಆಚರಿಸಲಾಗುತ್ತಿದೆ. ಚಂದ್ರಯಾನ–3 ಮುಗಿದಿದೆ. ಮುಂದೇನು ಮಾಡಬೇಕು? ಇಂತಹ ಇನ್ನೂ ನೂರಾರು ಹೊಸ ಹೊಸ ಯೋಜನೆಗಳಿಗೆ ಈ ಕಾರ್ಯಕ್ರಮ ಸ್ಫೂರ್ತಿ ಆಗಬೇಕು. ಅದಕ್ಕಾಗಿ ಯುಜನರು ಸಜ್ಜಾಗಬೇಕು’ ಎಂದು ತಿಳಿಸಿದರು. 

‘ನಿರಂತರ ಕಲಿಕೆ, ಸೋಲಿನಿಂದ ಪಾಠ ಕಲಿಯುವುದು, ನಾಯಕತ್ವ ಗುಣ ಬೆಳೆಸಿಕೊಳ್ಳುವುದು, ಮಾಡುವ ಕೆಲಸದಿಂದ ಗೌರವ ಗಳಿಸುವುದನ್ನು ಕಲಿತರೆ ನಿಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಹಾಗಾಗಿ, ಪ್ರತಿಯೊಬ್ಬರೂ ಈ ನಾಲ್ಕು ಸೂತ್ರಗಳೊಂದಿಗೆ ವ್ಯಕ್ತಿತ್ವ ಕಟ್ಟಿಕೊಳ್ಳಬೇಕು’ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net