ಇಸ್ರೋದಲ್ಲಿ ಮುಷ್ಟೂರು ಯುವಕನ ಅಳಿಲುಸೇವೆ, ಎರಡು ಉಡ್ಡಾವಣೆಯಲ್ಲಿ ಕಾರ್ಯ ನಿರ್ವಹಣೆ

ISRO
ದೇವದುರ್ಗ ತಾಲೂಕು ಮುಷ್ಟೂರು ಗ್ರಾಮದ ಯುವಕ ನಿಂಗರಾಜ ಗೆಳೆಯರ ಜತೆ ಇಸ್ರೋ ಕಚೇರಿ ಮುಂಭಾಗದಲ್ಲಿ ನಿಂತಿರುವುದು. (ಮಧ್ಯದವರು)
Published on

ದೇವದುರ್ಗ: ಚಂದ್ರಯಾನ-3, ಆದಿತ್ಯ ಎಲ್-1 ಯಶಸ್ವಿಯಾಗಿ ಉಡ್ಡಾಯನ ಮಾಡಿ ಜಗತ್ತಿನ ಗಮನ ಸೆಳೆದ ಇಸ್ರೋ ಸಾಧನೆ ಹಿಂದೆ ಹಲವು ವಿಜ್ಞಾನಿಗಳು ಹಾಗೂ ನೌಕರರು ತೆರೆಮರೆಯಲ್ಲಿ ಕೆಲಸ ಮಾಡಿದ್ದು, ಇದರಲ್ಲಿ ತಾಲೂಕಿನ ಮುಷ್ಟೂರು ಗ್ರಾಮದ ಯುವಕ ನಿಂಗರಾಜ ಕೂಡ ಅಳಿಲುಸೇವೆ ಮಾಡಿ ಗಮನ ಸೆಳೆದಿದ್ದಾರೆ.

ಮುಟ್ಟೂರು ಗ್ರಾಮದ ನಿಂಗರಾಜ 2016ರಲ್ಲಿ ಇಸ್ರೋದಲ್ಲಿ ಸೇವೆಗೆ ಸೇರಿಕೊಂಡಿದ್ದು 7ವರ್ಷದಿಂದ ಕೇಂದ್ರ ವಿದ್ಯುನ್ಮಾನ ರಚನಾ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸ್ವಗ್ರಾಮ ಮುಸ್ಟೂರು ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ನಂತರ ರಾಯಚೂರಿನ ಸರ್ಕಾರಿ ಕೈಗಾರಿಕೆ ತರಬೇತಿ ಕೇಂದ್ರದಲ್ಲಿ ಐಟಿಐ ಪದವಿ ಪೂರ್ಣಗೊಳಿಸಿ ಇಸ್ರೋದಲ್ಲಿ ಟೆಕ್ನಿಷನ್‌ಆಗಿ ಫಾಫ್ರಿಕೇಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಬಡತನದಲ್ಲಿ ಬೆಳೆದ ನಿಂಗರಾಜ, ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಅವರ ತಂದೆ ವೆಂಕೋಬ ಇಲ್ಲಿನ ಸಾರಿಗೆ ಸಂಸ್ಥೆಯಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೂರು ತಿಂಗಳ ಹಿಂದೆ ಉಡ್ಡಾವಣೆಗೊಂಡ ಚಂದ್ರಯಾನ-3, ಇತ್ತೀಚೆಗೆ ಗಗನಕ್ಕೆ ಹಾರಿದ ಆದಿತ್ಯ ಎಲ್-1 ಸೇರಿ ವಿವಿಧ ರಾಕೇಟ್ ಉಡ್ಡಾವಣೆಯಲ್ಲಿ ವಿದ್ಯುನ್ಮಾನ ರಚನಾ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಇಸ್ರೋದಲ್ಲಿ ನಿಂಗರಾಜನ ಅಳಿಲುಸೇವೆಗೆ ಪಾಲಕರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಶಿಕ್ಷಣ ಮುಗಿಸಿ ರಾಯಚೂರಿನಲ್ಲಿ ಐಟಿಐ ಪದವಿ ಪಡೆದು ಇಸ್ರೋದಲ್ಲಿ ಕೆಲಸಕ್ಕೆ ಸೇರಿದ್ದೇನೆ. ಇಸ್ರೋದಲ್ಲಿ ಸೇವೆ ಸಲ್ಲಿಸುತ್ತಿರುವುದು ದೇಶಕ್ಕೆ ಸೇವೆ ಸಲ್ಲಿಸಿದಷ್ಟೇ ಖುಷಿ ಆಗ್ತಿದೆ. ಕೇಂದ್ರ ವಿದ್ಯುನ್ಮಾನ ರಚನಾ ವಿಭಾಗದಲ್ಲಿ 7ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ.ನಿಂಗರಾಜ ಮುಷ್ಟೂರುಇಸ್ರೋದಲ್ಲಿ ಕೆಲಸ ಮಾಡುವ ಯುವಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net