

ಕೇಶವಮೂರ್ತಿ ವಿ.ಬಿ. ಹಾವೇರಿ
ಜಿಲ್ಲೆಯ ಹಲವೆಡೆ ಎಕ್ಕ, ರಾಜ, ರಾಣಿ ಆಟ ಸದ್ದಿಲ್ಲದೆ ನಡೆಯುತ್ತಿದ್ದು, ಜಾತ್ರೆ ನೆಪದಲ್ಲಿ ದಂಧೆಕೋರರು ವಿವಿಧ ಗ್ರಾಮಗಳ ಹೊರವಲಯದಲ್ಲಿ ವ್ಯವಸ್ಥಿತವಾಗಿ ಟೆಂಟ್ ಅಳವಡಿಸಿ, ಜೂಜಾಟಕ್ಕೆ ಆಹ್ವಾನಿಸುವ ಮೂಲಕ ಅಮಾಯಕರು ಬಲೆಗೆ ಸಿಲುಕಿಕೊಳ್ಳುವಂತೆ ವ್ಯೆಹ ರಚಿಸುತ್ತಿದ್ದಾರೆ.
ಜನವರಿಯಿಂದ ಏಪ್ರಿಲ್‌ವರೆಗೆ ಬಹುತೇಕ ಎಲ್ಲ ಗ್ರಾಮಗಳಲ್ಲಿ ಗ್ರಾಮದೇವತೆ ಜಾತ್ರೆ, ಉತ್ಸವ, ರಥೋತ್ಸವಗಳು ಜರುಗುತ್ತವೆ. ಈ ವೇಳೆ ಆಯಾ ಗ್ರಾಮಗಳಿಗೆ ಸುತ್ತಮುತ್ತಲ ಗ್ರಾಮಗಳ ಜನ, ಬಂಧುಗಳು ಬರುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ದಂಧೆಕೋರರು ವ್ಯವಸ್ಥಿತವಾಗಿ ಇಸ್ಪೀಟ್ ಮಾಯಾಜಾಲ ರೂಪಿಸುತ್ತಾರೆ. ಜಾತ್ರೆ ಮುಗಿದ ಬಳಿಕವೂ ಹಲವೆಡೆ ದಂಧೆ ಮುನ್ನಡೆಸುತ್ತಾರೆ.
ಹಾವೇರಿ ತಾಲೂಕಿನ ದೇವಗಿರಿ, ಅಗಡಿ, ಹೊಸರಿತ್ತಿ, ಗುತ್ತಲ, ಕಾಟೇನಹಳ್ಳಿ, ಕನವಳ್ಳಿ, ದೇವಿಹೊಸೂರ, ಕಬ್ಬೂರ, ರಾಣೆಬೆನ್ನೂರ ತಾಲೂಕಿನ ಹಲಗೇರಿ, ಕುಪ್ಪೇಲೂರ, ತುಮ್ಮಿನಕಟ್ಟಿ, ರಟ್ಟಿಹಳ್ಳಿ, ಮಾಸೂರ, ಬುಳ್ಳಾಪುರ, ಹಿರೇಕೆರೂರ ತಾಲೂಕಿನ ಹಂಸಭಾವಿ, ಚಿಕ್ಕೇರೂರ, ಕೋಡ, ಬ್ಯಾಡಗಿ ತಾಲೂಕು ಕಾಗಿನೆಲೆ, ಹಾನಗಲ್ಲ ತಾಲೂಕು, ಶಿಗ್ಗಾಂವಿ, ಸವಣೂರ ತಾಲೂಕಿನ ವಿವಿಧ ಗ್ರಾಮಗಳ ಹೊರವಲಯದಲ್ಲಿ ಇಸ್ಪೀಟ್ ದಂಧೆ ಆಗಾಗ ನಡೆಯುತ್ತದೆ. ಹೊರ ಜಿಲ್ಲೆಯ ಗ್ಯಾಂಬ್ಲರ್‌ಗಳೂ ಕೈಜೋಡಿಸುತ್ತಾರೆ.
ಊರ ಹೊರ ವಲಯದಲ್ಲಿ ಪರಿಚಯಸ್ಥರ ಹೊಲಗಳನ್ನು ಗುರುತಿಸಿ ಜನನಿಬಿಡ ಪ್ರದೇಶದಲ್ಲಿ ಅಲ್ಲಿ ಟೆಂಟ್ ಅಳವಡಿಸುತ್ತಾರೆ. ಅಲ್ಲಿ ಊಟ, ತಿಂಡಿ, ಗುಂಡು, ತುಂಡು ಎಲ್ಲ ವ್ಯವಸ್ಥೆ ಮಾಡಿ ಜೂಜುಕೋರರನ್ನು ಆಹ್ವಾನಿಸುತ್ತಾರೆ. ಹಲವೆಡೆ ಮಧ್ಯಾಹ್ನದಿಂದ ರಾತ್ರಿವರೆಗೂ ಈ ದಂಧೆ ನಡೆಯುತ್ತದೆ.
ಜೂಜಾಟಕ್ಕೆ ಸಿಲುಕುವ ಹಲವು ಕೂಲಿಕಾರರು, ಕಾರ್ಮಿಕರು, ರೈತರು ಹೊಲ, ಮನೆ, ಆಸ್ತಿ ಕಳೆದುಕೊಂಡು ಬೀದಿಗೆ ಬರುತ್ತಾರೆ. ಸಾಲಗಾರರ ಕಾಟ ತಡೆಯಲಾರದೇ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಈ ಹಿಂದೆ ನಡೆದಿವೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಇನ್ನೂ ಹಲವು ಕುಟುಂಬಗಳು ಬೀದಿಗೆ ಬರುವ ಆತಂಕವಿದೆ.
ಸ್ಥಳದಲ್ಲೇ ಸಾಲ, ಮೀಟರ್ ಬಡ್ಡಿ
ಇಸ್ಪೀಟ್ ಗ್ಯಾಂಬ್ಲರ್‌ಗಳು ಜೂಜಾಟಕ್ಕೆ ಬರುವವರ ಅಧ್ಯಯನ ಮಾಡಿ, ಸ್ಥಳದಲ್ಲೇ ಬೈಕ್, ಚಿನ್ನದ ಸರ, ಮೊಬೈಲ್, ಇತರ ವಸ್ತುಗಳನ್ನು ಅಡ ಇಟ್ಟುಕೊಂಡು ಸಾಲ ಕೊಡುತ್ತಾರೆ. 10 ಸಾವಿರ ಸಾಲಕ್ಕೆ 1 ಸಾವಿರ ರೂ., 1 ಲಕ್ಷಕ್ಕೆ 10 ಸಾವಿರ ರೂ. ಬಡ್ಡಿ, ಮೀಟರ್ ಬಡ್ಡಿ ಕಟ್ ಮಾಡಿಕೊಂಡೇ ಸಾಲ ಕೊಡುತ್ತಾರೆ. ಸಂಜೆ ವೇಳೆಗೆ ಅಥವಾ ಎರಡು ದಿನದಲ್ಲಿ ಸಾಲ ವಾಪಸ್ ಕೊಡುವಂತೆ ದುಂಬಾಲು ಬೀಳುತ್ತಾರೆ.
ಮೇಲಧಿಕಾರಿಗಳ ಯಾಮಾರಿಸುವ ಪೊಲೀಸರು ?
ಇಸ್ಪೀಟ್ ದಂಧೆಕೋರರಿಗೆ ಬೆನ್ನೆಲುಬಾಗಿ ನಿಲ್ಲುವ ಕೆಲ ಪೊಲೀಸ್ ಅಧಿಕಾರಿಗಳು ಆಯ್ದ ಸಿಬ್ಬಂದಿ ಮೂಲಕ ಮಾಮೂಲು ಪಡೆಯುತ್ತಾರೆ. ಮೇಲಧಿಕಾರಿಗಳ ಗಮನಕ್ಕೆ ಬಾರದಂತೆ ನೋಡಿಕೊಳ್ಳುತ್ತಾರೆ. ದಾಳಿ ವೇಳೆ ಇವರೇ ಮುನ್ಸೂಚನೆ ಕೊಟ್ಟು ಹಾದಿ ತಪ್ಪಿಸುತ್ತಾರೆ ಎಂಬ ಗಂಭೀರ ಆರೋಪಗಳಿವೆ. ಇತ್ತೀಚೆಗೆ ಜಿಲ್ಲೆಗೆ ಬಂದಿದ್ದ ಉಪಲೋಕಾಯುಕ್ತ ಬಿ.ವೀರಪ್ಪ ಅವರು ತಿಂಗಳೊಳಗೆ ಜೂಜಾಟ ತಡೆಯುವಂತೆ ಸೂಚಿಸಿದ್ದರು. ಈ ನಿಟ್ಟಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಇಸ್ಪೀಟ್ ದಂಧೆಕೋರರ ಹೆಡೆಮುರಿ ಕಟ್ಟಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ವರ್ಷವಾರು ಪ್ರಕರಣಗಳ ಅಂಕಿ-ಅಂಶ
ವರ್ಷ ದಾಖಲಾದ ಕೇಸ್ ಬಂಧಿತರ ಸಂಖ್ಯೆ
2023 193 479
2024 208 1,046
2025 (ಈವರೆಗೆ) 17 72
ಹಾವೇರಿ ತಾಲೂಕು ಸೇರಿ ಜಿಲ್ಲೆಯಲ್ಲಿ ಇಸ್ಪೀಟ್, ಮಟ್ಕಾ ಜೂಜಾಟ ಮಿತಿಮೀರಿದೆ. ದಂಧೆಕೋರರು ನದಿ ದಂಡೆ, ಹೊರವಲಯಗಳಲ್ಲಿ ಟೆಂಟ್ ಹಾಕಿ ಆಡಿಸುತ್ತಾರೆ. ಕೆಲ ಸ್ಥಳೀಯ ಪೊಲೀಸರು ಅವರಿಗೆ ಸಹಕರಿಸುತ್ತಿದ್ದಾರೆ. ಜಿಲ್ಲಾ ಎಸ್‌ಪಿ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ, ಜೂಜಾಟಕ್ಕೆ ಬ್ರೇಕ್ ಹಾಕಬೇಕು.
ಸಿದ್ದರಾಜ ಕಲಕೋಟಿ, ನಿಕಟಪೂರ್ವ ಜಿಲ್ಲಾಧ್ಯಕ್ಷ, ಬಿಜೆಪಿ
ಇಸ್ಪೀಟ್ ಜೂಜಾಟವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ದಂಧೆ ನಡೆಯುವ ವಿಷಯ ಗೊತ್ತಾದ ಕೂಡಲೇ ದಾಳಿ ನಡೆಸಿ, ಕಾನೂನು ಕ್ರಮ ಜರುಗಿಸಲಾಗುವುದು. ಇಸ್ಪೀಟ್ ಜೂಜಾಟದ ಕುರಿತು ಮಾಹಿತಿಗಳಿದ್ದಲ್ಲಿ ನೇರವಾಗಿ ಗಮನಕ್ಕೆ ತಂದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇನೆ.
ಅಂಶುಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ