ಐಸೋಲೇಷನ್ ವಾರ್ಡ್ ಆರಂಭ

20 ATHNAI_APARAJ_01-Web
ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ಮತ್ತು ಹೊರ ರೋಗಿಗಳು ಚಿಕಿತ್ಸೆಗೆ ದಾಖಲಾಗಿರುವುದು.
Published on

ಅಥಣಿ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ವೈರಸ್ ಪೀಡಿತರಿಗಾಗಿ ಐಸೋಲೇಷನ್ ವಾರ್ಡ್ ತೆರೆಯಾಲಾಗಿದೆ. ಆದರೆ, ಸರ್ಕಾರಿ ಆಸ್ಪತ್ರೆಗೆ ಕೆಮ್ಮು, ನೆಗಡಿ ಎಂದು ಬಂದ ರೋಗಿಗಳು ತಪಾಸಣೆ ಮಾಡುವಂತೆ ಮನವಿ ಮಾಡಿದರೂ ವೈದ್ಯರು ಹಿಂದೇಟು ಹಾಕುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ತೆರೆದಿದ್ದರೂ ಇಲ್ಲಿ ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಿಸದಿರುವುದು ಆತಂಕಕ್ಕೆ ಕಾರಣವಾಗಿದೆ. ದೇಶಾದ್ಯಂತ ಕರೊನಾ ವೈಸರ್ ಭೀತಿ ಹೆಚ್ಚಾಗುತ್ತಿದೆ. ತಾಲೂಕಿನ ಹಲವರಿಗೆ ಕೆಮ್ಮು, ನೆಗಡಿ ಕಾಣಿಸಿಕೊಂಡಿದ್ದು, ಅಥಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ತಮಗೆ ಕರೊನಾ ವೈರಸ್ ತಗುಲಿರುವ ಶಂಕೆ ಇದ್ದು, ತಪಾಸಣೆ ಮಾಡುವಂತೆ ಮನವಿ ಮಾಡಿದರೂ ಸಹ ವೈದ್ಯಾಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಎಲ್ಲ ತಾಲೂಕು ಕೇಂದ್ರಗಳಲ್ಲಿ ಐಸೋಲೇಷನ್ ವಾರ್ಡ್ ಆರಂಭಿಸಿ ಶಂಕಾಸ್ಪದ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ಆದೇಶ ನೀಡಿದೆ. ಆದರೆ, ಅಥಣಿ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ಆರಂಭಿಸಿದ್ದರೂ ಸಿಬ್ಬಂದಿ ಇಲ್ಲದೆ ಬಾಗಿಲು ಮುಚ್ಚಲಾಗಿದೆ. ಒಟ್ಟಿನಲ್ಲಿ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ವೈರಸ್ ಕುರಿತು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ. ಇನ್ನಾದರೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಎಚ್ಚೆತ್ತುಕೊಂಡು ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಬೇಕು. ಕೆಮ್ಮು, ನೆಗಡಿ, ಜ್ವರ ಹಾಗೂ ಉಸಿರಾಟದ ತೊಂದರೆ ಕಂಡು ಬಂದಲ್ಲಿ ಅಂತಹ ರೋಗಿಗಳನ್ನು ಐಸೋಲೇಷನ್ ವಾರ್ಡ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಬೇಕು ಎಂದು ಅಥಣಿ ತಾಲೂಕಿನ ರೋಗಿಯೊಬ್ಬರ ಸಂಬಂಧಿ ವಿನಯ ಅಂದಾಣಿ ಒತ್ತಾಯಿಸಿದ್ದಾರೆ.

ಈಗಾಗಲೇ ವಿದೇಶದಿಂದ ಬಂದಿರುವ 7 ಜನರ ಮೇಲೆ ನಿಗಾ ವಹಿಸಲಾಗಿದೆ. ಕರೊನಾ ವೈರಸ್‌ನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಈವರೆಗೆ ಅಥಣಿ ಪಟ್ಟಣ ಹಾಗೂ ತಾಲೂಕು ಮಟ್ಟದಲ್ಲಿ ಯಾವುದೇ ವ್ಯಕ್ತಿಗೆ ಕರೊನಾ ವೈರಸ್ ಕೋವಿಡ್-19 ಪಾಸಿಟಿವ್ ಇರುವುದು ಕಂಡು ಬಂದಿಲ್ಲ. ಸಾರ್ವಜನಿಕರು ಕೆಮ್ಮು, ನೆಗಡಿ ಇರುವವರಿಂದ ಕನಿಷ್ಠ ಒಂದು ಮೀಟರ್ ದೂರ ಇರುವಂತೆ ನೋಡಿಕೊಳ್ಳಬೇಕು. | ಚನಗೌಡ ಪಾಟೀಲ ಅಥಣಿ ತಾಲೂಕು ವೈದ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net