

ವಿಜಯಪುರ: ಸಂವಿಧಾನದ ವಿಧಿ 14 ಸಮಾನತೆ ಬಗ್ಗೆ ಹೇಳುತ್ತದೆ. ಕಲಂ 15 ಮತ್ತು 16ರಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ. ಅದರಲ್ಲಿ ಹಿಂದುಗಳು, ಮುಸಲ್ಮಾನರು, ಕ್ರಿಶ್ಚಿಯನ್ ಹೀಗೆ ಎಲ್ಲರೂ ಬರುತ್ತಾರೆ. ಆದರೂ, ಮುಸಲ್ಮಾನರಿಗೆ ಮೀಸಲಾತಿ ಕೊಡಲಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅವರು ಸಂವಿಧಾನದ ವಿರುದ್ಧ ಮಾತನಾಡುತ್ತಿದ್ದಾರೆ. ಹಿಂದುಗಳ ಮೀಸಲಾತಿ ಕಿತ್ತು ಮುಸಲ್ಮಾನರಿಗೆ ಕೊಡುತ್ತಿದ್ದಾರೆಂದು ಹೇಳುತ್ತಿದ್ದಾರೆ. ಒಬ್ಬ ಪ್ರಧಾನಿಯಾಗಿ ಈ ರೀತಿ ಮಾತುಗಳನ್ನಾಡುವುದು ಅವರ ಸ್ಥಾನಕ್ಕೆ ಚ್ಯುತಿ ತರುವ ಕೆಲಸ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಲೋಕಸಭೆ ಚುನಾವಣೆ ಹಿನ್ನೆಲೆ ಬಿಎಲ್‌ಡಿಈ ಸಂಸ್ಥೆಯ ನ್ಯೂ ಕ್ಯಾಂಪಸ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, 1977ನಲ್ಲಿಯೇ ಹಾವನೂರು ಆಯೋಗ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಡಬೇಕೆಂದು ಶಿಫಾರಸ್ಸು ಮಾಡಿದೆ. ಚಿನ್ನಪ್ಪ ರೆಡ್ಡಿ ಆಯೋಗವೂ ಇದನ್ನೇ ಶಿಫಾರಸು ಮಾಡಿದೆ. 2004 ರಲ್ಲಿ ಕರ್ನಾಟಕದಲ್ಲಿ ಮುಸಲ್ಮಾನರಿಗೆ ಮೀಸಲಾತಿಯನ್ನು 2 ಬಿ ಅಡಿಯಲ್ಲಿ ಪ್ರಾರಂಭಿಸಲಾಯಿತು. ಶೇ.4 ಮೀಸಲಾತಿಯನ್ನು ಕೊಡಲು ಪ್ರಾರಂಭಿಸಲಾಯಿತು. 94ರಿಂದ ಈವರೆಗೆ ಮೀಸಲಾತಿ ಹಾಗೆ ಉಳಿದುಕೊಂಡು ಬಂದಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮುಸಲ್ಮಾನರ ಶೇ.4 ಮೀಸಲಾತಿಯನ್ನು ತೆಗೆದುಹಾಕಿದರು. ಅದರ ವಿರುದ್ಧ ಮುಸಲ್ಮಾನ ಮುಖಂಡರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಿ, ಬಿಜೆಪಿಯವರು ಅಫಿಡವಿಟ್ ಹಾಕಿ ಯಥಾಸ್ಥಿತಿ ಮುಂದುವರೆಸುತ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ನರೇಂದ್ರ ಮೋದಿಯವರು ಮೀಸಲಾತಿ ನೀಡುತ್ತಿರುವುದು ಸಂವಿಧಾನ ಬಾಹಿರ ಎಂಬಂತೆ ಮಾತನಾಡುತ್ತಿರುವುದು ಆಶ್ಚರ್ಯವನ್ನುಂಟು ಮಾಡುತ್ತಿದೆ. ಧೃವೀಕರಣ ಮಾಡುವ ಪ್ರಯತ್ನ ಇದು ಸುಪ್ರೀಂ ಕೋರ್ಟ್ ಆದೇಶದ ನಂತರ ಹಿಂದೆ ಅವರೇ ಮುಂದುವರೆಸಿ ಈಗ ಹೊಸದಾಗಿ ಕೊಡಲಾಗುತ್ತಿದೆ ಎಂದು ಹೇಳುತ್ತಿರುವುದು ಅತ್ಯಂತ ದೊಡ್ಡ ಸುಳ್ಳು ಎಂದರು.
ನರೇಂದ್ರ ಮೋದಿಯವರು ಸುಳ್ಳು ಹೇಳುವುದರಲ್ಲಿ ಪ್ರವೀಣರು. ಸ್ವತಂತ್ರ ಭಾರತದಲ್ಲಿ ಆಗಿ ಹೋದ ಪ್ರಧಾನಮಂತ್ರಿಗಳ ಪೈಕಿ ಅತಿ ಹೆಚ್ಚು ಸುಳ್ಳು ಹೇಳುವುದು ನರೇಂದ್ರ ಮೋದಿಯವರು. ಸೋಲುವ ಹತಾಶೆಯಿಂದ ಹೇಳಿರುವುದೇ ಹೊರತು ಯಾವುದೇ ಸಂವಿಧಾನಾತ್ಮಕ ಅಂಶಗಳಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಜನ ಬಿಜೆಪಿಗೆ ಮತ ಹಾಕಿ 25 ಜನರನ್ನು ಆಯ್ಕೆ ಮಾಡಿದರು. ಆಯ್ಕೆ ಆಗಿರುವ ಯಾವೊಬ್ಬ ಸಂಸದರೂ ಕರ್ನಾಟಕಕ್ಕೆ ಅನ್ಯಾಯದ ಬಗ್ಗೆ ಬಾಯಿ ಬಿಡಲಿಲ್ಲ . ರಾಜ್ಯದ ಹಿತ ಕಾಪಾಡ ದವರು ಲೋಕಸಭೆಗೆ ಹೋದರೆ ಪ್ರಯೋಜನವಿಲ್ಲ ಎಂದರು.
ನರೇಂದ್ರ ಮೋದಿಯವರು ಹತ್ತು ವರ್ಷ ಪ್ರಧಾನಿಯಾಗಿ ಬಡವರು, ಯುವಕರು, ದಲಿತರು ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡಿಲ್ಲ. ಬೆಲೆಯೇರಿಕೆ, ನಿರುದ್ಯೋಗ, ರೈತರ ಸಂಸ್ಥೆಗಳ ಬಗ್ಗೆ ಪ್ರಧಾನಿಗಳು ಚರ್ಚೆ ಮಾಡುವುದಿಲ್ಲ. ಅವರು ಸಾಧನೆಗಳನ್ನು ಹೇಳದೆ ಭಾವನೆಗಳನ್ನು ಕೆರಳಿಸಿ, ಧರ್ಮ-ಧರ್ಮಗಳ ನಡುವೆ, ಜಾತಿ-ಜಾತಿಗಳ ನಡುವೆ ಬೆಂಕಿ ಇಡುವ ಕೆಲಸಗಳನ್ನು ಮಾಡಿದ್ದಾರೆ. ಇತ್ತೀಚಿನ ಅವರ ಭಾಷಣಗಳನ್ನು ಗಮನಿಸಿದರೆ ಮೊದಲಹಂತದ ಚುನಾವಣೆಯಲ್ಲಿ ಅವರು ನಿರೀಕ್ಷಿಸಿದ ಮತಗಳು ಬರುವುದಿಲ್ಲ ಎಂದು ಅವರು ಹತಾಶರಾಗಿದ್ದಾರೆ. ಸಂಬಂಧಪಡದ ಅನೇಕ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದರು
ನರೇಂದ್ರ ಮೋದಿಯವರು 2014ರ ನೀಡಿದ್ದ ಭರವಸೆಗಳನ್ನು ನೆನೆಸಿಕೊಳ್ಳಬೇಕು. ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಬರಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ ರೈತರ ಆದಾಯ ದುಪ್ಪಟ್ಟು ಆಗಲಿಲ್ಲ, ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗಲಿಲ್ಲ. ಅಚ್ಚೇ ದಿನ್ ಬರಲಿಲ್ಲ. ಆದರೆ, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೂಲಕ ಬಡವರು, ಮಹಿಳೆಯರು, ನಿರುದ್ಯೋಗಿಗಳಿಗೆ ಬಲ ತುಂಬುವ ಕೆಲಸ ಮಾಡುತ್ತಿದೆ. ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಸಕ್ಕರೆ ಸಚಿವ ಶಿವಾನಂದ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಪ್ರಸಕ್ತ ಲೋಕ ಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಿಸಿಕೊಡುವುದಾಗಿ ವಾಗ್ದಾನ ಮಾಡಿದರು.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಸಹಕಾರದಿಂದಾಗಿ 136 ಸ್ಥಾನಗಳಲ್ಲಿ ಗೆಲ್ಲುವಲ್ಲಿ ನಾವು ಸಫಲರಾಗಿದ್ದೇವೆ. ಅದೇ ರೀತಿ ಲೋಕಸಭೆ ಚುನಾವಣೆಯಲ್ಲಿಯೂ ಕನಿಷ್ಠ 20 ಸ್ಥಾನಗನ್ನು ಗೆಲ್ಲಿಸಿಕೊಡುವಲ್ಲಿ ನಾವೆಲ್ಲರೂ ಒಟ್ಟಾಗಿ ಶ್ರಮಿಸುವುದಾಗಿ ತಿಳಿಸಿದರು.
ಶಾಸಕ ಯಶವಂತರಾಯಗೌಡ ಪಾಟೀಲ ಸ್ವಾಗತಿಸಿದರು. ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ, ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ, ಶಾಸಕರಾದ ಅಶೋಕ ಮನಗೂಳಿ, ಸಿ.ಎಸ್. ನಾಡಗೌಡ, ವಿಠಲ ಕಟಕದೊಂಡ, ವಿಪ ಸದಸ್ಯರಾದ ಸುನೀಲಗೌಡ ಪಾಟೀಲ, ಪ್ರಕಾಶ ರಾಠೋಡ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಡಾ.ಮಕ್ಬೂಲ ಬಾಗವಾನ, ಕಾಂತಾ ನಾಯಕ ಮತ್ತಿತರರಿದ್ದರು. ಪಕ್ಷದ ಅಭ್ಯರ್ಥಿ ರಾಜು ಆಲಗೂರ ಅನುಪಸ್ಥಿತಿ ಎದ್ದು ಕಾಣುತ್ತಿತ್ತಲ್ಲದೇ ಚುನಾವಣೆ ಖರ್ಚು ವೆಚ್ಚಗಳ ಕಾರಣಕ್ಕೆ ಅವರನ್ನು ವೇದಿಕೆಯಿಂದ ದೂರವಿಡಲಾಗಿದೆ ಮತ್ತೂ ಅವರ ಫೋಟೊ ಬ್ಯಾನರ್‌ನಲ್ಲಿ ಅಳವಡಿಸಿಲ್ಲ ಎಂಬ ಮಾತು ಕೇಳಿ ಬಂತು.