ಫೆಬ್ರವರಿಗೆ ಐಲಂಡ್ ಪ್ಲಾಟ್‌ಫಾರ್ಮ್ ಪೂರ್ಣ

platform
Published on

ಮಂಗಳೂರು: ದೇಶದ ಪ್ರಾಚೀನ ಹಾಗೂ ಕರಾವಳಿಯ ಪ್ರಮುಖ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ವಿವಿಧೆಡೆಗೆ ಹೊಸ ರೈಲು ಆರಂಭಿಸಲು ಅಗತ್ಯವಿರುವ 4 ನೇ ಹಾಗೂ 5ನೇ ಐಲಂಡ್(ದ್ವೀಪ ಮಾದರಿ) ಪ್ಲಾಟ್‌ಫಾರ್ಮ್‌ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಪ್ಲಾಟ್‌ಫಾರ್ಮ್ ಬದಿಯ ಗೋಡೆ ಹಾಗೂ ಮಣ್ಣು ತುಂಬಿ ಭೂಮಿ ಸಮತಟ್ಟು ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ನೆಲಹಾಸು, ಸೂರು ನಿರ್ಮಾಣ ಮತ್ತು ಫುಟ್ ಓವರ್ ಬ್ರಿಡ್ಜ್ ಕಾಮಗಾರಿಯ ವಿಸ್ತರಣೆ ಬಾಕಿ ಉಳಿದಿದೆ. ರೈಲ್ವೆ ವಿಭಾಗೀಯ ಪ್ರಬಂಧಕ ತ್ರಿಲೋಕ್ ಕೊಠಾರಿ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ಫೆಬ್ರವರಿ ಅಂತ್ಯದೊಳಗೆ ಹೊಸ 4 ನೇ ಹಾಗೂ 5ನೇ ಫ್ಲಾಟ್‌ಫಾರ್ಮ್‌ಗಳು ಬಳಕೆಗೆ ಸಿದ್ಧವಾಗಬಹುದು ಎಂದು ದಕ್ಷಿಣ ರೈಲ್ವೆ ಪಾಲಕ್ಕಾಡ್ ವಿಭಾಗೀಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಕೆ.ಗೋಪಿನಾಥನ್ ತಿಳಿಸಿದ್ದಾರೆ.

4.5 ಕೋಟಿ ರೂ. ವೆಚ್ಚ: ಕರಾವಳಿ ಭಾಗದ ಪ್ರಯಾಣಿಕರು, ಪ್ರಯಾಣಿಕರ ಸಂಘಟನೆಗಳು ಹಾಗೂ ಹೋರಾಟಗಾರರ ಬಹುಕಾಲದ ಒತ್ತಾಯದ ಫಲವಾಗಿ 2022ರ ಮೇ ತಿಂಗಳಲ್ಲಿ ಹೊಸ ಫ್ಲಾಟ್‌ಫಾರ್ಮ್‌ಗಳ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಹೊಸ ಪ್ಲಾಟ್‌ಫಾರ್ಮ್‌ಗಳು 540 ಮೀಟರ್ ಉದ್ದ ಹಾಗೂ 10 ಮೀಟರ್ ಅಗಲವಿರಲಿವೆ. ಇಲ್ಲಿ 24 ಎಲ್‌ಎಚ್‌ಬಿ ಬೋಗಿ ಹಾಗೂ 26 ಐಸಿಎಫ್ ಬೋಗಿಗಳ ನಿಲುಗಡೆ ಸಾಧ್ಯವಾಗಲಿದೆ. ಒಟ್ಟು ಕಾಮಗಾರಿಯ ವೆಚ್ಚ ಸುಮಾರು 4.5 ಕೋಟಿ ರೂ. ಹೊಸ ಪ್ಲಾಟ್‌ಫಾರ್ಮ್‌ಗಳು ನೇರ ರಸ್ತೆ ಸಂಪರ್ಕ ಹೊಂದಿರುವುದಿಲ್ಲ. ಇತರ ಪ್ಲಾಟ್‌ಫಾರ್ಮ್‌ಗಳಿಂದ ಫುಟ್ ಓವರ್ ಬ್ರಿಡ್ಜ್ ಮೂಲಕ 4 ಮತ್ತು 5 ನೇ(ಹೊಸ) ಪ್ಲಾಟ್‌ಫಾರ್ಮ್‌ಗಳನ್ನು ಪ್ರವೇಶಿಸಬೇಕಾಗುತ್ತದೆ. ನೇರ ರಸ್ತೆ ಸಂಪರ್ಕ ಹೊಂದಿರುವ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಒಂದು, ಎರಡು ಹಾಗೂ ಮೂರನೇ ಪ್ಲಾಟ್‌ಫಾರ್ಮ್‌ಗಳು ಐಲಂಡ್ ಪ್ಲಾಟ್‌ಫಾರ್ಮ್ ಅಲ್ಲ.

ಬೃಹತ್ ಮರಗಳ ಸ್ಥಳಾಂತರ: ಪ್ರಸ್ತಾವಿತ ಯೋಜನೆ ಭಾಗವಾಗಿ 50 ಹಾಗೂ 20 ವರ್ಷಗಳ ತಲಾ ಎರಡು ಬೃಹತ್ ಅಶ್ವತ್ಥ ವೃಕ್ಷಗಳನ್ನು ಪರಿಸರವಾದಿ ಜೀತ್ ಮಿಲನ್ ರೋಷ್ ಮಾರ್ಗದರ್ಶನದಲ್ಲಿ ಇತ್ತೀಚೆಗೆ ಸ್ಥಳಾಂತರಿಸಲಾಗಿದೆ. ಬೃಹತ್ ಮರಗಳನ್ನು ಮೂಲ ಸ್ಥಳದಿಂದ 200 ಮೀಟರ್ ದೂರದಲ್ಲಿ ಯಶಸ್ವಿಯಾಗಿ ಸ್ಥಳಾಂತರಿಸಲು ಬೃಹತ್ ಕ್ರೇನ್, ಅತ್ಯಾಧುನಿಕ ಯಂತ್ರೋಪಕರಣಗಳು, ಇಲಾಖೆಯ ಸಿಬ್ಬಂದಿ, ಪರಿಸರವಾದಿಗಳ ನೆರವನ್ನು ಬಳಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net