

ಹುಬ್ಬಳ್ಳಿ: ಕೊಲೆ, ಹಿಂಸೆಯಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಈಚೆಗೆ ಇಸ್ಲಾಮಿಕ್ ಮೂಲಭೂತವಾದ ದೇಶದಲ್ಲಿ ಹೆಚ್ಚಾಗುತ್ತಿದೆ. ಇದನ್ನು ಹೇಳಿದರೆ ಕಾಂಗ್ರೆಸ್ನವರು ಕೋಮುವಾದ ಎನ್ನುತ್ತಾರೆ. ಈ ದಿಸೆಯಲ್ಲಿ ಆಯಾ ಸಮಾಜದವರು ತಮ್ಮ ಸಮುದಾದಯದ ಜನರಿಗೆ ತಿಳಿ ಹೇಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಲಹೆ ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಮಂಗಳೂರು ಕೊಲೆ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಬಂಧಿಸಲಾಗಿದೆ. ಯುಪಿ ಮಾದರಿ ಜಾರಿ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ ಎಂದು ಉತ್ತರಿಸಿದರು.
ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಯುತ್ತಿದ್ದೇವು ಎಂದು ಕೆಲವರು ಹೇಳಿರುವುದು ಸರಿಯಲ್ಲ. ಅದು ನಮ್ಮ ಸಂಸ್ಕೃತಿಯಲ್ಲ. ಎನ್ಕೌಂಟರ್ ಎಂಬುದು ಒಂದು ಘಟನೆ. ಅದನ್ನು ಬೇಕೆಂದಾಗ ಪ್ರಯೋಗ ಮಾಡಲು ಬರುವುದಿಲ್ಲ. ಆರೋಪಿ ತಪ್ಪಿಸಿಕೊಂಡು ಓಡುವಾಗ ಅದನ್ನು ಕೆಲವೊಮ್ಮೆ ಪ್ರಯೋಗ ಮಾಡುತ್ತಾರೆ. ಮಂಗಳೂರು ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ನವರು ರಾಷ್ಟ್ರಪ್ರೇಮ, ರಾಷ್ಟ್ರ ಭಕ್ತಿಗಿಂತ ಸಣ್ಣ ವಿಷಯಗಳನ್ನು ರಾಜಕೀಯಗೊಳಿಸುವುದರ ಮೇಲೆ ಹೆಚ್ಚು ಆಸಕ್ತಿ ತೋರುತ್ತಾರೆ. ರಾಷ್ಟ್ರಧ್ವಜ ವಿಚಾರದಲ್ಲೂ ಇದನ್ನೇ ಮಾಡುತ್ತಿದ್ದಾರೆ ಎಂದು ಆಸಮಾಧಾನ ವ್ಯಕ್ತಪಡಿಸಿದ ಜೋಶಿ ಅವರು, ಅಮೃತ ಸ್ವಾತಂತ್ರೊ್ಯೕತ್ಸವ ಹಿನ್ನೆಲೆಯಲ್ಲಿ ಪ್ರತಿ ಮನೆ ಮೇಲೆ ಧ್ವಜ ಹಾರಿಸಬೇಕೆಂಬ ಸಂಕಲ್ಪದೊಂದಿಗೆ ಯೋಜನೆ ರೂಪಿಸಲಾಗಿದೆ. ಇದನ್ನೇ ನೆಪ ಮಾಡಿಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಕಾಲದಲ್ಲಿ ಜನರನ್ನು ಜೋಡಿಸುವ ಕೆಲಸ ಮಾಡಲಿಲ್ಲ, ದೇಶ ನನ್ನದು ಎಂಬ ಭಾವನೆ ಬರುವಂತಹ ಕಾರ್ಯಕ್ರಮಗಳನ್ನು ರೂಪಿಸಲಿಲ್ಲ. ಈಗ ಮೋದಿ ಅವರ ನೇತೃತ್ವದಲ್ಲಿ ಆಗುತ್ತಿರುವುದನ್ನು ಸಹಿಸುತ್ತಿಲ್ಲ ಎಂದರು.
ಧ್ವಜ ನಿರ್ಮಾಣ ಸಂಸ್ಥೆ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಕಾಂಗ್ರೆಸ್ ನಾಯಕ ರಾಹುಲ್, ಸೋನಿಯಾ ಗಾಂಧಿ ಯಾರೇ ಭೇಟಿ ನೀಡಬಹುದು. ಆದರೆ, ವಾಸ್ತವದಲ್ಲಿ ದೇಶಕ್ಕೆ ಬೇಕಾದ 10 ಕೋಟಿ ಧ್ವಜ ತಯಾರಿಕೆ ಅವರಿಂದ ಸಾಧ್ಯವಿಲ್ಲ ಎಂದು ಗೊತ್ತಾದ ನಂತರವೇ ಒಂದಿಷ್ಟು ಬದಲಾವಣೆ ಮಾಡಿಕೊಂಡು ಪ್ರತಿ ಮನೆಗೆ ಕಡಿಮೆ ವೆಚ್ಚದಲ್ಲಿ ಧ್ವಜ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಸಾಮಾನ್ಯ ವ್ಯಕ್ತಿಯೂ ತನ್ನ ಮನೆ ಮೇಲೆ ಧ್ವಜ ಹಾರಿಸಬೇಕೆಂಬುದು ನಮ್ಮ ಇಚ್ಚೆ ಎಂದರು.