ಉಡುಪಿ ವಿಡಿಯೋ ಪ್ರಕರಣದ ಹಿಂದೆ ಇಸ್ಲಾಮಿಕ್ ಕೈವಾಡ : ಪ್ರಮೋದ್ ಮುತಾಲಿಕ್

pramod mutalik
Published on

ಮೈಸೂರು: ಉಡುಪಿ ಕಾಲೇಜು ವಿಡಿಯೋ ಪ್ರಕರಣದ ಹಿಂದೆ ಇಸ್ಲಾಮಿಕ್ ಕೈವಾಡವಿದ್ದು, ಸೂಕ್ತ ತನಿಖೆ ನಡೆಸಿ ಸತ್ಯಾಂಶ ಹೊರತರಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಷ್ಟು ವಿಡಿಯೋಗಳು ಆಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಹೋಗಿದ್ದಾವೋ ಗೊತ್ತಿಲ್ಲ. ಎಲ್ಲವೂ ಸಮಗ್ರವಾಗಿ ತನಿಖೆಯಾಗಬೇಕು. ವಿಡಿಯೋ ಚಿತ್ರೀಕರಣ ಮಾಡಿದ ವಿದ್ಯಾರ್ಥಿನಿಯರು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ವಿಡಿಯೋ ಚಿತ್ರೀಕರಣ ಮಾಡಿಲ್ಲ ಎಂದಾದರೆ ಅವರು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದು ಏತಕ್ಕೆ ಎಂದು ಪ್ರಶ್ನಿಸಿದರು.

ಪ್ರಕರಣದ ಕುರಿತು ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ಅವರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಘಟನೆ ನಡೆಯದೆ ಇದ್ದಿದ್ದರೆ ಮುಖ್ಯಮಂತ್ರಿ ಏತಕ್ಕೆ ಅಲ್ಲಿಗೆ ಹೋಗಬೇಕಾಗಿತ್ತು? ಈ ವಿಚಾರದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಖುಷ್ಬು ನೀಡಿದ ಹೇಳಿಕೆ ಸರಿಯಲ್ಲ. ಅವರು ಸತ್ಯಾಂಶ ತಿಳಿದು ಮಾತನಾಡಬೇಕಾಗಿತ್ತು ಎಂದರು.

ತಿ.ನರಸೀಪುರದ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣವು ಪೂರ್ವಯೋಜಿತ ಕೊಲೆಯಾಗಿದೆ, ಇದರಲ್ಲಿ ವೈಯಕ್ತಿಕ ಕಾರಣ ಏನು ಇಲ್ಲ. ಹಿಂದು ವಿರೋಧಿಗಳು ಈ ಕೊಲೆ ಮಾಡಿದ್ದಾರೆ. ಹನುಮ ಜಯಂತಿಯೇ ಈ ಕೊಲೆಗೆ ಕಾರಣ. ಹನುಮ ಜಯಂತಿಯನ್ನು ಸಹಿಸದ ಹಿಂದು ವಿರೋಧಿಗಳು ಈ ಕೊಲೆ ಮಾಡಿದ್ದಾರೆ. ಇದನ್ನು ಕಾಂಗ್ರೆಸ್ ಸರ್ಕಾರ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ಪ್ರಕರಣದ ಕೊಲೆ ಆರೋಪಿಗಳನ್ನು ಜೈಲಿನಿಂದ ಬಿಡಿಸುವ ಕೆಲಸವೂ ನಡೆಯುತ್ತಿದೆ. ಆದರೆ, ಪ್ರಕರಣ ಮುಚ್ಚಿ ಹಾಕಲು ಶ್ರೀರಾಮಸೇನೆ ಬಿಡುವುದಿಲ್ಲ. ವೇಣುಗೋಪಾಲ್ ಪತ್ನಿಗೆ ಸರ್ಕಾರಿ ಕೆಲಸದ ಜತೆಗೆ 25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಧರ್ಮಸ್ಥಳ ಭಾಗದಲ್ಲಿ ಸೌಜನ್ಯ ಕೊಲೆ ಒಂದೇ ಅಲ್ಲ, ಇಪ್ಪತ್ತಕ್ಕೂ ಹೆಚ್ಚು ಅಂತಹ ಘಟನೆಗಳು ನಡೆದಿವೆ. ಸೌಜನ್ಯ ಪ್ರಕರಣದಲ್ಲಿ ಅಮಾಯಕನಿಗೆ ಹತ್ತು ವರ್ಷ ಶಿಕ್ಷೆ ಆಗಿದ್ದು, ಸೌಜನ್ಯ ಕುಟುಂಬಕ್ಕೆ ಅನ್ಯಾಯವಾಗಿದೆ. ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕಾದರೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚಿಸಿ ಪ್ರಕರಣದ ಮರು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net