

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಇಸ್ಕಾನ್ ವತಿಯಿಂದ ರಾಯಾಪುರದಲ್ಲಿರುವ ದೇವಸ್ಥಾನದಲ್ಲಿ ಏರ್ಪಡಿಸಿರುವ ಸಾಂಸ್ಕೃತಿಕ ಉತ್ಸವದ ಎರಡನೇ ದಿನ ಮಕ್ಕಳು ವಿವಿಧ ಪ್ರತಿಭೆ ಪ್ರದರ್ಶಿಸಿ ಗಮನ ಸೆಳೆದರು.
ಎಲ್ ಕೆಜಿ, ಯುಕೆಜಿ ಮಕ್ಕಳಿಗಾಗಿ ಏರ್ಪಡಿಸಿದ್ದ ಬಣ್ಣ ತುಂಬುವ ಸ್ಪರ್ಧೆಯಲ್ಲಿ 400ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಕೃಷ್ಣನ ಚಿತ್ರಗಳಿಗೆ ಬಣ್ಣ ತುಂಬಿ ತಮ್ಮ ಕಲ್ಪನಾ ಸಮರ್ಥ್ಯ ಪ್ರದರ್ಶಿಸಿದರು.
ಎಂಟರಿಂದ 10ನೇ ತರಗತಿ ಮಕ್ಕಳಿಗಾಗಿ ಆಯೋಜಿಸಿದ್ದ ಏಕವ್ಯಕ್ತಿ ಶಾಸ್ತ್ರೀಯ ನತ್ಯ ಸ್ಪರ್ಧೆಯಲ್ಲಿ 30 ವಿದ್ಯಾರ್ಥಿಗಳು ಪಾಲ್ಗೊಂಡು ಉತ್ಸವಕ್ಕೆ ಮೆರಗು ತಂದರು.
ಪೌರಾಣಿಕ ವೇಷ ಭೂಷಣಗಳ ಸ್ಪರ್ಧೆಯಲ್ಲಿ 3 ಮತ್ತು 4ನೇ ತರಗತಿಯ ಮಕ್ಕಳು ಅರ್ಜುನ, ಹನುಮಾನ್, ದ್ರೌಪದಿ ಮತ್ತು ಸತ್ಯಭಾಮೆ ಮುಂತಾದ ವೇಷಗಳನ್ನು ಧರಿಸಿ ವೇದಿಕೆಗೆ ಕಳೆ ತಂದರು. ತಮ್ಮ ಪಾತ್ರಗಳ ಸಹಜ ಅಭಿವ್ಯಕ್ತಿಯೊಂದಿಗೆ ಪ್ರೇಕರ ಮನಸೂರೆಗೊಂಡರು.
ಗಾಯನ ಸ್ಪರ್ಧೆಯಲ್ಲಿ 8ರಿಂದ 10ನೇ ತರಗತಿಯ ಸುಮಾರು 100 ವಿದ್ಯಾರ್ಥಿಗಳು ಭಾಗವಹಿಸಿ, ದಾಸರು ರಚಿಸಿದ ಪದ, ಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.
ವೈದಿಕ ಪ್ರಶ್ನೋತ್ತರ ಸ್ಪರ್ಧೆಯಲ್ಲಿ 5ರಿಂದ 7ನೇ ತರಗತಿಯ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅರ್ಹತಾ ಸುತ್ತಿನ ಲಿಖಿತ ಪ್ರಶ್ನೋತ್ತರ ಸ್ಪರ್ಧೆಯು ಮಕ್ಕಳ ಬುದ್ದಿ ಶಕ್ತಿ ಹಾಗೂ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸಿತು.
ಒಟ್ಟಾರೆ, ಇಸ್ಕಾನ್ ಸಾಂಸ್ಕೃತಿಕ ಉತ್ಸವ (ಹೆರಿಟೇಜ್ ಫೆಸ್ಟ್) ವಿದ್ಯಾರ್ಥಿಗಳು, ಮಕ್ಕಳಲ್ಲಿನ ಪ್ರತಿಭೆಗೆ ಸೂಕ್ತ ವೇದಿಕೆಯಾಗಿದೆ ಎಂದು ಇಸ್ಕಾನ್ ಅಧ್ಯಕ್ಷ ಶ್ರೀ ರಾಜೀವ ಲೋಚನ ದಾಸ್ ತಿಳಿಸಿದ್ದಾರೆ.