

ಕಂಪ್ಲಿ: ಬಳ್ಳಾರಿ ಜಿಲ್ಲೆಯಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯ ಫೌಂಡೇಷನ್ ಸ್ವಯಂ ಸೇವಾ ಸಂಸ್ಥೆಗೆ ಮಧ್ಯಾಹ್ನದ ಬಿಸಿಯೂಟ ಮತ್ತು ಬಿಸಿ ಹಾಲು ಕೊಡುವ ಕ್ರಮ ವಿರೋಧಿಸಿ ತಾಲೂಕಿನ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಪದಾಧಿಕಾರಿಗಳು ಸೋಮವಾರ ಶಾಸಕ ಜೆ.ಎನ್.ಗಣೇಶಗೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷೆ ಖುರ್ಷಿದ್ ಬೇಗಮ್, ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಬಂದು 22ವರ್ಷಗಳಾಗಿದ್ದು, ಶಾಲಾ ಮಕ್ಕಳಿಗೆ ಸಕಾಲಕ್ಕೆ ತಾಜಾ ಮತ್ತು ಬಿಸಿಯೂಟ ಪೂರೈಸುತ್ತಾ ಬಂದಿದ್ದೇವೆ.
ಇದರಿಂದ ಮಕ್ಕಳಿಗೆ ಬಿಸಿಯೂಟದೊಡನೆ 1,18,000 ಮಹಿಳೆಯರಿಗೆ ಉದ್ಯೋಗ ದೊರೆತಿದೆ. ಕೇವಲ 3,600ರೂ. ಸಂಭಾವನೆಗೆ ದುಡಿಯುತ್ತಿದ್ದು, ಇದರ ಮೇಲೆ ಕುಟುಂಬ ನಿರ್ವಹಿಸುತ್ತಿದ್ದೇವೆ. ಈ ಉದ್ಯೋಗವನ್ನು ಕಸಿದು ಇಸ್ಕಾನ್ ಸಂಸ್ಥೆಗೆ ನೀಡಲು ಮುಂದಾಗಿರುವುದು ಸರಿಯಲ್ಲ. 2012-13ರಲ್ಲಿಯೇ ಸರ್ಕಾರೇತರ ಸಂಘ ಸಂಸ್ಥೆಗಳಿಗೆ, ಹೊಸದಾಗಿ ಸಂಘ ಸಂಸ್ಥೆಗಳ ಮೂಲಕ ಕ್ಯಾಟರಿಂಗ್ ಮಾಡುವುದನ್ನು ಸರ್ಕಾರ ನಿಷೇಧಿಸಿದೆ.
ಬಿಸಿಯೂಟ ಪೂರೈಸಲು ನಾವು ಸಮರ್ಥರಿದ್ದೇವೆ. ಯಾವುದೇ ಕಾರಣಕ್ಕೂ ಬಿಸಿಯೂಟವನ್ನು ಇಸ್ಕಾನ್‌ಗೆ ಕೊಡಬಾರದು ಎಂದು ಒತ್ತಾಯಿಸಿದರು.