ಇಸ್ಕಾನ್ ಸಾಂಸ್ಕೃತಿಕ ಉತ್ಸವ 24ರಿಂದ

iskcon press meet
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ರಾಯಾಪುರದ ಇಸ್ಕಾನ್ ಆವರಣದಲ್ಲಿ ಜೂ. 24 ರಿಂದ 28ರವರೆಗೆ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ ಎಂದು ಇಸ್ಕಾನ್ ಹುಬ್ಬಳ್ಳಿ-ಧಾರವಾಡ ಅಧ್ಯಕ್ಷ ರಾಜೀವ ಲೋಚನದಾಸ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಯಾವುದೇ ಶಾಲೆಯ ವಿದ್ಯಾರ್ಥಿಗಳು ಶುಲ್ಕ ರಹಿತವಾಗಿ ಭಾಗವಹಿಸುವ ಮುಕ್ತ ಸ್ಪರ್ಧೆ ಇದಾಗಿದೆ. ಈಗಾಗಲೇ 12 ಸಾವಿರ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಸ್ಪರ್ಧೆಯ ದಿನ ಸ್ಥಳದಲ್ಲಿಯೇ ಹೆಸರು ನೋಂದಾಯಿಸಲು ಅವಕಾಶವಿದೆ. ಎಲ್​ಕೆಜಿ-ಯುಕೆಜಿ, 1ರಿಂದ 5ನೇ ತರಗತಿ ಹಾಗೂ 6ರಿಂದ 10ನೇ ತರಗತಿ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ನಾಟಕ, ನೃತ್ಯ, ರಂಗೋಲಿ, ಗಾಯನ, ವೇದಿಕ್ ರಸಪ್ರಶ್ನೆ, ಬಣ್ಣ ತುಂಬುವ, ಸೇರಿ 30 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.

ಸ್ಪರ್ಧೆಗಳ ವಿಜೇತರಿಗೆ ಅಕರ್ಷಕ ಬಹುಮಾನ, ಎಲ್ಲ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಮೊದಲೆರಡು ಶಾಲೆಗಳಿಗೆ ಸಾಂಸ್ಕೃತಿಕ ಉತ್ಸವ ಟ್ರೋಫಿ ಹಾಗೂ ರನ್ನರ್ ಅಪ್ ಟ್ರೋಫಿ ವಿತರಿಸಲಾಗುವುದು. ಅತಿ ಹೆಚ್ಚು ಸ್ಪರ್ಧಿಗಳನ್ನು ಕಳುಹಿಸಿದ ಶಾಲೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಶಿಕ್ಷಕರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಸ್ವರ್ಣ ಗ್ರುಪ್ ಆಫ್ ಕಂಪನೀಸ್​ನ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಸಿಕೊಡುವ ಅಗತ್ಯವಿದೆ. ಇಸ್ಕಾನ್ ಸಾಂಸ್ಕೃತಿಕ ಉತ್ಸವ ಈ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಉಪಯುಕ್ತ ಪರಿಕಲ್ಪನೆಯಾಗಿದೆ. ಹಲವು ವರ್ಷಗಳಿಂದ ನಾವು ಇದಕ್ಕೆ ಪ್ರೋತ್ಸಾಹ ನೀಡುತ್ತ ಬಂದಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹ-ಧಾ ಇಸ್ಕಾನ್ ಉಪಾಧ್ಯಕ್ಷ ರಘೊತ್ತಮ ದಾಸ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net