

ಉತ್ತರಕನ್ನಡ: ಉಗ್ರ ಚಟುವಟಿಕೆಯಲ್ಲಿ ನಿರತರ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಕಾರ್ಯಾಚರಣೆ ಮುಂದುವರಿದಿದ್ದು, ಇಂದು ಮತ್ತೊಬ್ಬ ಉಗ್ರ ಸಿಕ್ಕಿಬಿದ್ದಿದ್ದಾನೆ. ಉತ್ತರಕನ್ನಡದಲ್ಲಿ ಎನ್ಐಎ ಹಾಗೂ ಕರ್ನಾಟಕ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಲಾಗಿದೆ.
ಭಟ್ಕಳ ಮೂಲದ ಜಫ್ರಿ ಜಹ್ವಾರ್ ದಾಮುದಿ ಎಂಬಾತ ಬಂಧಿತ. ಈತ ಅಬು ಹಾಜಿರ್ ಅಲ್ ಬದ್ರಿ ಎಂಬ ಹೆಸರಿನ ಪ್ರತ್ಯೇಕ ಸೈಬರ್ ಘಟಕ ಹೊಂದಿದ್ದು, ಆ ಮೂಲಕ ಭಾರತದಲ್ಲಿ ಐಸಿಸ್ ಸಂಘಟನೆಗೆ ನೇಮಕಾತಿ ನೋಡಿಕೊಳ್ಳುತ್ತಿದ್ದ. ಅಲ್ಲದೆ ಎನ್ಕ್ರಿಪ್ಟೆಡ್ ಚಾಟಿಂಗ್ ಸಿಸ್ಟಮ್ಗಳಲ್ಲಿ ಸಕ್ರಿಯನಾಗಿದ್ದ ಈತ ಐಸಿಸ್ ವಿಚಾರಧಾರೆಗಳನ್ನು ದಕ್ಷಿಣ ಭಾರತದ ವಿವಿಧ ಭಾಷೆಗಳಿಗೆ ಭಾಷಾಂತರಿಸುತ್ತಿದ್ದ.
ಎನ್ಐಎ ತನಿಖಾ ತಂಡ ಕರ್ನಾಟಕದ ಎರಡು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ದಾಳಿ ವೇಳೆ ಮೊಬೈಲ್ಫೋನ್ಗಳು, ಹಾರ್ಡ್ ಡಿಸ್ಕ್ ಹಾಗೂ ಎಸ್ಡಿ ಕಾರ್ಡುಗಳನ್ನು ವಶಕ್ಕೆ ಪಡೆದಿದೆ.