ಸೌದಿಯಲ್ಲಿರುವ ಸೂತ್ರಧಾರನಿಗೆ ಬಲೆ

abduugra
Published on

ಮಂಗಳೂರು: ನಗರದ ಬಿಜೈ ಮತ್ತು ನ್ಯಾಯಾಲಯ ಸಮೀಪ ಕಾಣಿಸಿಕೊಂಡ ಉಗ್ರ ಸಂಘಟನೆ ಪರ ಗೋಡೆ ಬರಹದ ಹಿಂದೆ ಸೌದಿಯಲ್ಲಿರುವ ಮಾಸ್ಟರ್‌ಮೈಂಡ್, ಶಂಕಿತ ಉಗ್ರ ಅಬ್ದುಲ್ ಮತೀನ್ ಅಹ್ಮದ್ ತಾಹಾ ಇರುವುದು ಖಚಿತವಾಗಿದ್ದು, ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ತೀರ್ಥಹಳ್ಳಿ ನಿವಾಸಿಗಳಾದ ಮುಹಮ್ಮದ್ ಶಾರೀಕ್, ಮಾಝ್ ಮುನೀರ್ ಹಾಗೂ ಸಾದಿಕ್ ಎಂಬುವರನ್ನು ಈಗಾಗಲೇ ಬಂಧಿಸಲಾಗಿದ್ದು, ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಆರೋಪಿಗಳಾದ ಶಾರೀಕ್ ಮತ್ತು ಮುನೀರ್ ವಿಚಾರಣೆ ವೇಳೆ ಕೆಲವು ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಇವರಿಬ್ಬರೂ ಗೋಡೆ ಬರಹ ಬರೆಯುವ ಮುನ್ನ ವಿದೇಶದಲ್ಲಿರುವ ಅಬ್ದುಲ್ ಮತೀನ್ ಅಹ್ಮದ್ ತಾಹಾ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಆತನೂ ಮೂಲತಃ ತೀರ್ಥಹಳ್ಳಿಯವನಾಗಿದ್ದು, ಗೋಡೆ ಬರಹಕ್ಕೆ ಕುಮ್ಮಕ್ಕು ನೀಡಿರುವುದು ತನಿಖೆಯಿಂದ ಬಹಿರಂಗವಾಗಿದೆ. ಬಂಧನಕ್ಕೆ ಪೊಲೀಸರು ಪ್ರಯತ್ನ ಮುಂದುವರಿಸಿದ್ದಾರೆ.

ಗೋಲಿಬಾರ್‌ಗೆ ಪ್ರತೀಕಾರ?: ಸಿಎಎ ಜಾರಿ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ನಡೆದಿದ್ದ ಗೋಲಿಬಾರ್‌ಗೆ ಪ್ರತೀಕಾರ ತೀರಿಸಲು ಮಾಸ್ಟರ್ ಮೈಂಡ್ ಯೋಜನೆ ರೂಪಿಸಿದ್ದ. ಮಂಗಳೂರಿನ ಜನರಲ್ಲಿ ಭಯ ಹಾಗೂ ಆತಂಕದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಶಾರೀಕ್ ಮತ್ತು ಮುನೀರ್ ಮೂಲಕ ಉಗ್ರ ಪರ ಬರಹ ಬರೆಯಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎನ್‌ಐಎಗೆ ಬೇಕಾದ ಆರೋಪಿ: ಅಬ್ದುಲ್ ಮತೀನ್ ಅಹ್ಮದ್ ತಾಹಾ ಎನ್‌ಐಎ ಅಧಿಕಾರಿಗಳಿಗೆ ಬೇಕಾಗಿರುವ ಆರೋಪಿ. ಈತನ ಬಗ್ಗೆ ಮಾಹಿತಿ ನೀಡಿದವರಿಗೆ 3 ಲಕ್ಷ ರೂ. ಬಹುಮಾನ ನೀಡುವುದಾಗಿ ಅಧಿಕಾರಿಗಳು ಘೋಷಿಸಿದ್ದಾರೆ. ಬೆಂಗಳೂರು, ನವದೆಹಲಿ ಮೊದಲಾದ ಕಡೆ ಹುಡುಕಾಟ ನಡೆಸಿದ್ದಾರೆ. ಕಳೆದ ವರ್ಷ ಬೆಂಗಳೂರಿನ ಬನ್ನೇರುಘಟ್ಟದ ಗುರಪ್ಪನ ಪಾಳ್ಯದಲ್ಲಿ ಈತನ ಇಬ್ಬರು ಸಹಚರರಾದ ಅಬ್ದುಲ್ ಸಲೀಂ ಮತ್ತು ಜಾಯೇದ್ ಎಂಬುವರು ಸಿಕ್ಕಿ ಬಿದ್ದಿದ್ದರು. ಇವರು ಯುವಕರನ್ನು ಸಂಪರ್ಕಿಸಿ, ಮನವೊಲಿಸಿ ತಮ್ಮ ಸಂಘಟನೆಗೆ ಸೇರಿಸಿಕೊಳ್ಳುವ ಕೆಲಸ ಮಾಡುತ್ತಿದ್ದರು. ಅಬ್ದುಲ್ ಮತೀನ್ ಇವರಿಗೆ ಹಣಕಾಸು ಹಾಗೂ ಮಾರ್ಗದರ್ಶನ ನೀಡುತ್ತಿದ್ದ ಎಂಬ ಮಾಹಿತಿ ತಿಳಿದು ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net