

ಹುಬ್ಬಳ್ಳಿ: ಮಧ್ಯಪ್ರದೇಶದ ಭೂಪಾಲ್ನಲ್ಲಿ ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಯೋಜಿಸಿರುವ ಇಂಡಿಯಾ ಓಪನ್ ಶೂಟಿಂಗ್ ಚಾಂಪಿಯನ್ಶಿಪ್ನ ಮಹಿಳೆಯರ ಪಿಸ್ತೂಲ್ ವಿಭಾಗದಲ್ಲಿ ಸೋಮವಾರ ಹುಬ್ಬಳ್ಳಿ ಶೂಟಿಂಗ್ ಸ್ಪೋರ್ಟ್ಸ್ ಅಕಾಡೆಮಿಯ ಐಶ್ವರ್ಯ ಬಾಲೆಹೊಸೂರ ಚಾಂಪಿಯನ್ ಆಫ್ ಚಾಂಪಿಯನ್ ಟ್ರೋಫಿ ಜಯಿಸಿದರು.
ಫೈನಲ್ನಲ್ಲಿ 8 ಸ್ಪರ್ಧಿಗಳ ನಡುವಿನ ಹಣಾಹಣಿಯಲ್ಲಿ ಐಶ್ವರ್ಯ ಜಯಶಾಲಿಯಾದರು. ಗುಜರಾತಿನ ತಿಶಾ ಲಿಂಬಾಡ್ 2ನೇ ಹಾಗೂ ರುತಿಕಾ ಕಹರ್ ತೃತೀಯ ಸ್ಥಾನ ಪಡೆದರು. ಆ. 16ರವರೆಗೆ ನಡೆಯುವ ಚಾಂಪಿಯನ್ಶಿಪ್ನಲ್ಲಿ ವಿವಿಧ ರಾಜ್ಯಗಳಿಂದ 114 ಮಹಿಳಾ ಶೂಟರ್ಗಳು ಭಾಗವಹಿಸಿದ್ದಾರೆ.
ಆ. 10ರಿಂದ ಆರಂಭಗೊಂಡಿರುವ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ಶೂಟರ್ಗಳು ಇಲ್ಲಿಯವರೆಗೆ 1 ಚಿನ್ನ, 1 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಜಯಿಸಿದ್ದಾರೆ.
ಮಹಿಳೆಯರ ಜೂನಿಯರ್ ಸಬ್ ಯುತ್ ವಿಭಾಗದಲ್ಲಿ ಸಮೀಕ್ಷಾ ಅರುಣ ಒಂದು ಚಿನ್ನ ಹಾಗೂ ಎರಡು ಕಂಚು, ಮಾಸ್ಟರ್ ವಿಭಾಗದಲ್ಲಿ ಐಎಎಸ್ ಅಧಿಕಾರಿ ಡಾ. ಕೆ.ವಿ. ತ್ರಿಲೋಕಚಂದ್ರ ಬೆಳ್ಳಿ, ಪುರುಷರ ಗ್ರುಪ್ ಪಿಸ್ತೂಲ್ ವಿಭಾಗದಲ್ಲಿ ಸಿದ್ದಾರ್ಥ ದಿವಟೆ, ಮಲ್ಲಿಕಾರ್ಜುನ ಹಾಗೂ ರವಿಕುಮಾರ್ ಕಂಚು, ಮಹಿಳೆಯರ ಗ್ರುಪ್ ಪಿಸ್ತೂಲ್ ವಿಭಾಗದಲ್ಲಿ ಐಶ್ವರ್ಯ ಬಾಲೆಹೊಸೂರು, ಪ್ರತಿಭಾ ಭಟ್ನಿ ಹಾಗೂ ಧನ್ಯಾ ಕಂಚಿನ ಪದಕ ಗೆದ್ದಿದ್ದಾರೆ.