ರೈತರ ಬೆಳೆ ರಕ್ಷಿಸಲು ತಂತಿ ಬೇಲಿ ವಿತರಣೆ ಎಂದ ಖಂಡ್ರೆ

IMG_20230810_131619_2
Published on

ಹುಮನಾಬಾದ್​: ಪರಿಸರ ಸಂರಕ್ಷಣೆ ಹಾಗೂ ಅರಣ್ಯ ಅಭಿವೃದ್ಧಿಗೆ ಹೆಚ್ವಿನ ಆದ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದಲ್ಲಿ ಗುರುವಾರ ಮಾಜಿ ಸಚಿವ ದಿ.ಬಸವರಾಜ ಪಾಟೀಲ್ ರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಸರ ಮಾಲಿನ್ಯ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ವನಮೋತ್ಸವ ಕಾರ್ಯಕ್ರಮದಡಿ ರಾಜ್ಯದಲ್ಲಿ 5 ಕೋಟಿ ಸಸಿ ನೆಡಲು ನಿರ್ಧರಿಸಿದಂತೆ, ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಇದುವರೆಗೆ ರಾಜ್ಯದಲ್ಲಿ 3.18 ಕೋಟಿಗೂ ಅಧಿಕ ಸಸಿ ನೆಡಲಾಗಿದೆ.  ಉಳಿದ ಸಸಿ ಆಗಸ್ಟ್​ ಅಂತ್ಯದವರೆಗೆ ನೆಡಲಾಗುವುದು. ಜಿಲ್ಲೆಯಲ್ಲಿ 15 ಲಕ್ಷ ಸಸಿ ನಡೆವ ಗುರಿಯಲ್ಲಿ ಶೇ.70 ಪ್ರತಿಶತಕ್ಕೂ ಅಧಿಕ ಸಾಧನೆ ಮಾಡಲಾಗಿದೆ. ಉಳಿದ ಸಸಿಗಳನ್ನು ನೆಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ವನ್ಯ ಪ್ರಾಣಿಗಳ ಹಾವಳಿಗೆ ರೈತರು ಸಮೃದ್ಧವಾಗಿ ಬೆಳೆದ ಬೆಳೆ ಹಾನಿಯಾದರೆ  ಸರಕಾರದಿಂದ ಪರಿಹಾರ ಧನ ಒದಗಿಸಲಾಗುವುದು.  ವನ್ಯ ಪ್ರಾಣಿಗಳ ಹಾವಳಿಗೆ ರೈತರು ಬೆಳೆ ಹಾನಿಯಾಗಿರುವ ಕುರಿತು ಪರಿಶೀಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕಾರಿಗಳು ಪರಿಶೀಲಿಸಿ ಸಲ್ಲಿಸಿರುವ ವರದಿ ಆಧಾರದ ಮೇಲೆ ರೈತರಿಗೆ ಪರಿಹಾರ ಒದಗಿಸಲಾಗುವುದು. ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ರೈತರ ಹೊಲಗಳಲ್ಲಿ ಕಾಡು ಪ್ರಾಣಿಗಳಿಂದ  ಬೆಳೆ ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಸೋಲಾರ್​ ತಂತಿ ಬೇಲಿ ನೀಡಲಾಗುತ್ತಿದ್ದು, ಅವಶ್ಯ ಇದ್ದರೆ ಅಂತಹ ರೈತರು ಅರ್ಜಿ ಸಲ್ಲಿಸಿದರೆ ಸರ್ಕಾರದ ನಿಯಮಾನುಸಾರ ತಂತಿ ಬೇಲಿ ಅಳವಡಿಸಿಕೊಡಲಾತ್ತದೆ ಎಂದು ತಿಳಿಸಿದರು . ಹುಮನಾಬಾದ್ಪ​ ಕೈಗಾರಿಕಾ ಪ್ರದೇಶದಲ್ಲಿ ಕೆಲ ಕಾರ್ಖಾನೆಗಳು ನಿಯಮ ಪಾಲಿಸದೆ ನಡೆಸುತ್ತಿರುವುದರಿಂದ ಅಂತಹ ಕಾರ್ಖಾನೆ ವಿರುದ್ಧ  ಸೂಕ್ತ ಕಾನೂನು ಕ್ರಮ ಕೈಗೊಂಡು  8 ಟೈರ್ ಪೈರೋಲಿಸಿಸ್ ಘಟಕ  ಮುಚ್ಚಿಸಲಾಗಿದೆ ಎಂದರು.

ಕೆಮಿಕಲ್ ಕಾರ್ಖಾನೆಗಳು ಇವೆಯೇ ಎಂಬ ಪ್ರಶ್ನೆಗೆ, ಇಲ್ಲಿನ ಎರಡು ಕೆಮಿಕಲ್ ಕಾರ್ಖಾನೆಗಳಿಗೂ ನೋಟಿಸ್ ಜಾರಿಯಾಗಿದೆ. ಪರಿಸರ ಹಾನಿಯಾಗದಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಕೈಗಾರಿಕಾ ಪ್ರದೇಶದ ಸುತ್ತಲಿನ ಗ್ರಾಮಗಳ ಜನರ ಹೋರಾಟ ಹಾಗೂ ಹಿಂದಿನ ಸರಕಾರದ ಅವಧಿಯಲ್ಲಿ ಶಾಸಕರಾಗಿದ್ದ ಮಾಜಿ ಸಚಿವ ರಾಜಶೇಖರ ಪಾಟೀಲ್ ಹೋರಾಟದ ಪ್ರತಿಫಲವಾಗಿ ಈ ಕಾರ್ಖಾನೆ ಘಟಕ ಮುಚ್ಚಿಸಿ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು. 

ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ, ವಾಯು ಹಾಗೂ ಜಲ ಮಾಲಿನ್ಯ ಮೂಲಕ ಪಟ್ಟಣ ಸೇರಿದಂತೆ ಸುತ್ತಮೂತ್ತಲಿನ ಗ್ರಾಮಗಳ ಜನರ ಜೀವಕ್ಕೆ ಕುತ್ತಾಗಿರುವ  ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿನ ಕೆಲ ಕಾರ್ಖಾನೆಗಳನ್ನು ಮುಚ್ಚಿಸಿ ಜನರಿಗೆ ಸೂಕ್ತ ನ್ಯಾಯ ಒದಗಿಸಿಕೊಟ್ಟ ಕೀರ್ತಿ, ಶ್ರೇಯಸ್ಸು ಪರಿಸರ ಸಂರಕ್ಷಣೆ ಹಾಗೂ ಅರಣ್ಯ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿರುವ ಸಚಿವ ಈಶ್ವರ ಖಂಡ್ರೆಗೆ ಅವರಿಗೆ ಸಲ್ಲುತ್ತದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಈ ಘಟಕಗಳಿಂದ ಕೇವಲ ವಾಯು ಮಾಲಿನ್ಯ ತಡೆಗಟ್ಟಬಹುದಾಗಿದ್ದು, ಜಲ ಮಾಲಿನ್ಯ ಉಂಟಾಗುವುದನ್ನು ಸಹ ತಡೆಗಟ್ಟಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ ಎಂದು ಸಚಿವರ ಗಮನಕ್ಕೆ ತಂದರು.

ವಿಧಾನ ಪರಿಷತ್ ಸದಸ್ಯರಾದ ಡಾ . ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್,  ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net