ಕೊತ್ತನೂರಿನಲ್ಲಿ 22.8 ಎಕರೆ ಮರು ವಶಕ್ಕೆ ಈಶ್ವರ ಖಂಡ್ರೆ  ಸೂಚನೆ

Ishwar Khandre
Published on

ಬೆಂಗಳೂರು: ನಗರದ ಕೆ.ಆರ್.ಪುರ ಹೋಬಳಿ ಕೊತ್ತನೂರಿನ ಸರ್ವೆ ನಂ.48ರಲ್ಲಿ ಅರಣ್ಯ ಇಲಾಖೆಗೆ ವಹಿಸಲಾದ 22. 8 ಎಕರೆ ಜಮೀನು ಮರುವಶಕ್ಕೆ ಪಡೆಯುವಂತೆ ಅರಣ್ಯಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಬೆಂಗಳೂರು ನಗರದಲ್ಲಿ ಹಸಿರು ಹೊದಿಕೆ ಹೆಚ್ಚಿಸಲು 1999-2000ದಲ್ಲಿ ಕೊತ್ತನೂರು ಗ್ರಾಮದ ಸರ್ವೆ ನಂ.48ರಲ್ಲಿ 22.08 ಎಕರೆ ಜಮೀನಿನಲ್ಲಿ ನೆಡುತೋಪು ಅಭಿವೃದ್ಧಿಪಡಿಸುವ ಸಲುವಾಗಿ ಈ ಭೂಮಿಯನ್ನು ಅರಣ್ಯ ಇಲಾಖೆಗೆ ವಹಿಸಲಾಗಿದೆ. ಆದರೆ ಈ ಜಮೀನು ವಶಕ್ಕೆ ಪಡೆದು ಅರಣ್ಯ ಬೆಳೆಸುವಲ್ಲಿ ವಿಫಲವಾಗಿರುವ ಇಲಾಖೆಯ ಹಿಂದಿನ ಅಧಿಕಾರಿಗಳ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆಗೆ ಮಂಜೂರಾದ 22.08 ಎಕರೆ ಭೂಮಿಯ ಪೈಕಿ 13 ಎಕರೆ ಜಮೀನನ್ನು ಅರಣ್ಯ ಇಲಾಖೆಗೆ ವಹಿಸಲಾಗಿದೆ ಎಂದು ಅಂದಿನ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಆದೇಶದಂತೆ ಪಹಣಿಯಲ್ಲಿ ನಮೂದಾಗಿದೆ. ಈ ಜಮೀನಿನ ನಕ್ಷೆ ಪಡೆದು ಉಳಿದ 9 ಎಕರೆಯ ದಾಖಲೆಗಳನ್ನೂ ಮಾಡಿಸಿ, ಸುಮಾರು 700 ಕೋಟಿ ರೂ. ಬೆಲೆ ಬಾಳುವ ಜಮೀನು ಒತ್ತುವರಿಯಾಗಿದ್ದರೆ ಅದನ್ನು ಅರಣ್ಯ ಇಲಾಖೆಯ ವಶಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾದ ಬಳಿಕ ಇದೇ ಕೊತ್ತನೂರು ಗ್ರಾಮದ ಸರ್ವೆ ನಂಬರ್ 47ರಲ್ಲಿ 2006ರಲ್ಲಿ ಅರಣ್ಯ ಇಲಾಖೆಗೆ ಮಂಜೂರಾಗಿ ಒತ್ತುವರಿಯಾಗಿದ್ದ 17.34ಎಕರೆ ಜಮೀನನ್ನು ಮರು ವಶಪಡಿಸಿಕೊಂಡು ಇಲ್ಲಿ ಸಸ್ಯೋದ್ಯಾನ ಮತ್ತು ಪಕ್ಷಿಲೋಕ ನಿರ್ಮಿಸಲು ಶಂಕುಸ್ಥಾಪನೆಯನ್ನೂ ನೆರೆವೇರಿಸಿದ್ದರು.

ಅರಣ್ಯ ಇಲಾಖೆಗೆ ಮಂಜೂರಾಗಿದ್ದ ಈ ಭೂಮಿಯನ್ನು 17 ವರ್ಷಗಳ ತರುವಾಯ 2023ರ ಜನವರಿಯಲ್ಲಿ ಅಂದಿನ ಉಪ ವಿಭಾಗಾಧಿಕಾರಿ ಎಂ.ಜಿ. ಶಿವಣ್ಣ ಮತ್ತು ತಹಸೀಲ್ದಾರ್ ಅಜಿತ್ ರೈ ಏಕಪಕ್ಷೀಯವಾಗಿ ‘ಸರ್ಕಾರಿ ಭೂಮಿ’ ಎಂದು ಬದಲಾಯಿಸಿ. ಅರಣ್ಯ ಭೂಮಿ ಒತ್ತುವರಿ ಮಾಡಿದ್ದವರಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ಮಾಡಿದ್ದರು.

ಕಾನೂನು ಬಾಹಿರವಾಗಿ ಅರಣ್ಯ ಭೂಮಿಯನ್ನು ಕಂದಾಯ ಎಂದು ಮಾರ್ಪಾಡು ಮಾಡಿದ್ದ ಅಂದಿನ ಅಸಿಸ್ಟೆಂಟ್ ಕಮಿಷನರ್ ಮತ್ತು ತಹಸೀಲ್ದಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆದೇಶ ನೀಡಿದ್ದರು. ಇಬ್ಬರು ಹಿರಿಯ ಕೆಎಎಸ್ ಅಧಿಕಾರಿಗಳ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net