ಕರೊನಾ ತಡೆಗಟ್ಟುವಲ್ಲಿ ಸರ್ಕಾರ ವಿಫಲ

kandre new
Published on

ಬೆಳ್ತಂಗಡಿ: ದೇಶ ಹಾಗೂ ರಾಜ್ಯದಲ್ಲಿ ಕರೊನಾ ಮಾಹಾಮಾರಿ ವೇಗವಾಗಿ ಹರಡುತ್ತಿದ್ದು, ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ದೂರಿದರು.

ಸೋಮವಾರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳಪೆ ಮಟ್ಟದ ಪಿಪಿಇ ಕಿಟ್‌ನಿಂದಾಗಿ ಕರೊನಾ ವಾರಿಯರ್ಸ್‌ಗಳ ಜೀವಕ್ಕೆ ರಕ್ಷಣೆ ಇಲ್ಲದಂದಾಗಿದೆ. ಸ್ಯಾನಿಟೈಸರ್‌ಗೆ ನೀರು ಬೆರಸಿ ಖರೀದಿಯಲ್ಲಿ ಅಕ್ರಮ ಎಸಗಿರುವ ಕುರಿತು ತನಿಖೆ ನಡೆಸಬೇಕು. ಕೋವಿಡ್ ಪರೀಕ್ಷೆ ಫಲಿತಾಂಶ ತಡವಾಗಿ ಬರುತ್ತಿದ್ದು, ಶಂಕಿತರಿಂದ ಬೇರೆಯವರಿಗೆ ಹರಡುವ ಸಾಧ್ಯತೆ ಹೆಚ್ಚಿದೆ. ಪರೀಕ್ಷೆಯನ್ನು ದಿನಂಪ್ರತಿ 25 ಸಾವಿರಕ್ಕೆ ಹೆಚ್ಚಿಸಬೇಕು. ಅವೈಜ್ಞಾನಿಕ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಹಿಂಜರಿತವಾಗಿದೆ. ಆದಾಯ ತೆರಿಗೆ ಮಿತಿಯ ಕೆಳಗೆ ಇರುವವರಿಗೆ ಕೂಡಲೇ ನೇರವಾಗಿ 10 ಸಾವಿರ ರೂ. ಖಾತೆಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಶಕುಂತಳಾ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಕೇಶವ ಗೌಡ ಬೆಳಾಲು, ಜಿಪಂ ಸದಸ್ಯ ಶೇಖರ ಕುಕ್ಕೇಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್, ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಧರ್ಮಸ್ಥಳ ಗ್ರಾಪಂ ಅಧ್ಯಕ್ಷ ಚಂದನ್ ಕಾಮತ್ ಮತ್ತಿತರರಿದ್ದರು.

ಕಾಂಗ್ರೆಸ್ ಹೋರಾಟ ಎಚ್ಚರಿಕೆ: ರಾಜ್ಯ ಸರ್ಕಾರ ಜನವಿರೋಧಿ, ರೈತ ವಿರೋಧಿ ಕಾಯ್ದೆಗಳನ್ನು ತರುತ್ತಿದ್ದು, ಕೃಷಿ ಭೂಮಿ ಮುಕ್ತ ಖರೀದಿ ಅವಕಾಶ ಮೂಲಕ ಲ್ಯಾಂಡ್ ಮಾಫಿಯಾಗೆ ಪ್ರೋತ್ಸಾಹ ನೀಡುತ್ತಿದೆ. ಇದರಿಂದ ರೈತರು ಭವಿಷ್ಯದಲ್ಲಿ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಹೋರಾಟ ನಡೆಸಲಿದ್ದು, ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕು ಎಂದು ಈಶ್ವರ ಖಂಡ್ರೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net