

ಗುತ್ತಲ: ಮನುಷ್ಯನ ಸರ್ವ ಇಷ್ಟಾರ್ಥಗಳನ್ನು ಪೂರ್ಣ ಮಾಡುವ ಹಾಗೂ ಸಕಲ ಅನಿಷ್ಟಗಳನ್ನು ದೂರ ಮಾಡುವ ಶಕ್ತಿ ಇಷ್ಟಲಿಂಗ ಪೂಜೆಗಿದೆ. ಇಷ್ಟಲಿಂಗ ಪೂಜೆ ಮಾಡುವುದರಿಂದ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ನೆಗಳೂರು ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರಾವಣ ಮಾಸ ಪ್ರಯುಕ್ತ ಸಮೀಪದ ನೆಗಳೂರಿನ ಶ್ರೀ ಮಠದಲ್ಲಿ ಸೋಮವಾರ ಆಯೋಜಿಸಿದ್ದ 7ನೇ ವರ್ಷದ ಇಷ್ಟಲಿಂಗ ಮಹಾಪೂಜೆ ಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆರ್ಶೀವಚನ ನೀಡಿದರು. ಇಷ್ಟಲಿಂಗ ಪೂಜೆ ಕೇವಲ ವೀರಶೈವ ಲಿಂಗಾಯತರಿಗೆ ಮಾತ್ರ ಸಿಮೀತವಾಗಿಲ್ಲ. ಯಾವುದೇ ಜಾತಿ, ಮತ, ಲಿಂಗ ಬೇಧವಿಲ್ಲದೇ ಶ್ರೀ ಗುರುವಿನಿಂದ ಲಿಂಗದೀಕ್ಷೆ ಪಡೆದುಕೊಂಡು ಇಷ್ಟಲಿಂಗ ಪೂಜೆ ಮಾಡಬಹುದಾಗಿದೆ. ಇಷ್ಟಲಿಂಗ ಪೂಜೆಗೆ ಎಲ್ಲಿಯೂ ಹೋಗಬೇಕಾಗಿಲ್ಲ. ಯಾರೊಬ್ಬರ ನೆರವು ಬೇಕಾಗಿಲ್ಲ. ಕೇವಲ ನಿರ್ಮಲವಾದ ಶುದ್ಧ ಮನಸಿನಿಂದ ಶುದ್ಧ ಜಲ, ಭಸ್ಮ, ಒಂದು ಬಿಲ್ವ ಪತ್ರೆ ಇಟ್ಟು ಪ್ರಾರ್ಥಿಸಿದರೆ ಭಗವಂತ ಪ್ರಸನ್ನನಾಗಿ ಸಕಲ ಇಷ್ಟಾರ್ಥಗಳನ್ನು ದಯಪಾಲಿಸುತ್ತಾನೆ ಎಂದರು.
ನಮ್ಮ ಸನಾತನ ಹಿಂದು ಧರ್ಮದಲ್ಲಿ ಶ್ರಾವಣ, ಭಾದ್ರಪದ, ಆಶ್ವಿಜ, ಕಾರ್ತಿಕ ಮಾಸಗಳಿಗೆ ಬಹಳಷ್ಟು ಪ್ರಾಮುಖ್ಯತೆ ನೀಡಲಾಗಿದೆ. ಇವುಗಳನ್ನು ಚಾತುರ್ವಸ್ಯವೆಂದು ಕರೆಯಲ್ಪಟ್ಟು, ಒಂದೊಂದು ಮಾಸದಲ್ಲಿ ಒಂದೊಂದು ದೇವಾನುದೇವತೆಗಳನ್ನು ಆರಾಧಿಸಿ ಭಗವಂತನ ಕೃಪೆಗೆ ಪಾತ್ರಾರಾಗುತ್ತಾರೆ. ಶ್ರಾವಣ ಮಾಸವು ಶಿವನ ಆರಾಧನೆ, ಭಾದ್ರಪದ ಮಾಸವು ಗಣೇಶನಿಗೆ, ಆಶ್ವಿಜ ಮಾಸವು ಪಾರ್ವತಿ ದೇವಿಗೆ, ಕಾರ್ತಿಕ ಮಾಸವು ಷಣ್ಮುಖನನ್ನು ಆರಾಧಿಸಿ ಭಕ್ತಾದಿಗಳು ತಮ್ಮ ಮನೋಭಿಲಾಷೆಗಳನ್ನು ಈಡೇರಿಸಿಕೊಳ್ಳುತ್ತಾರೆ ಎಂದರು.
ಶ್ರೀಗಳ ಪೂಜೆಯಲ್ಲಿ ಬಂಕಾಪುರದ ರುದ್ರಾಣಿ ಮಹಿಳಾ ತಂಡದಿಂದ ಶ್ರೀರುದ್ರ ಪಠಣ, ಶ್ರೀ ಮಠದ ಪಾಠ ಶಾಲಾ ವಿದ್ಯಾರ್ಥಿಗಳಿಂದ ಭಕ್ತಿಗೀತೆ ಗಾಯನ ಜರುಗಿತು. ನೆಗಳೂರ, ಹೊಸರಿತ್ತಿ, ಗುತ್ತಲ, ಅರೇಮಲ್ಲಾಪುರ, ಹಿರೇಮುಗದೂರ, ಬೆಳವಿಗಿ, ಮೇವುಂಡಿ ಗ್ರಾಮಗಳ ಭಕ್ತರು ಭಾಗಿಯಾಗಿದ್ದರು. ನಂತರ ಅನ್ನ ಸಂತರ್ಪಣೆ ಜರುಗಿತು