

ಜಡೇದೇವರ ಮಠದಲ್ಲಿ ಮಹಾಶಿವಪೂಜೆ
ಮಾಗಡಿ: ಇಷ್ಟಲಿಂಗ ಮಹಾಶಿವ ಪೂಜೆ ನಿರಾಕಾರ ಪರಮಾತ್ಮನ ಸಾಕಾರ ರೂಪದ ಪೂಜೆಯಾಗಿದೆ. ಸಾಮಾಜಿಕ ಸಮಾನತೆ ಮತ್ತು ಅಂತರಂಗದ ಶುದ್ಧಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸುತ್ತೂರು ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಜಡೇದೇವರ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಇಷ್ಟಲಿಂಗ ಮಹಾಶಿವಪೂಜೆ ಹಾಗೂ ಮುತ್ತಿನ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ವೀರಶೈವ&ಲಿಂಗಾಯತ ಸಂಪ್ರದಾಯದಲ್ಲಿ ಇಷ್ಟ ಲಿಂಗಪೂಜೆಗೆ ಬಹಳ ಮಹತ್ವ ಇದೆ. ಈ ಪೂಜೆಯಿಂದ ಇಷ್ಟಾರ್ಥ ಸಿದ್ಧಿಸುತ್ತದೆ. ಮೋಕ್ಷ ಪ್ರಾಪ್ತಿಯಾಗಲಿದೆ. ಇಷ್ಟಲಿಂಗದ ನಿರಂತರ ಪೂಜೆಯಿಂದ ಲಿಂಗ ಮತ್ತು ಅಂಗಗಳ ನಡುವೆ ಸಾಮರಸ್ಯ ಸಾಧಿಸಬಹುದಾಗಿದೆ. ಷಟ್ಸ್ಥಲ ಕ್ರಮದ ಒಂದು ಭಾಗವಾಗಿದೆ. ಇಷ್ಟಲಿಂಗವು ಸಾಮಾಜಿಕ ಸಮಾನತೆ, ಭಕ್ತಿ ಮತ್ತು ಆಧ್ಯಾತ್ಮಿಕ ಸಾಧನೆಗೆ ದಾರಿಯಾಗಿದೆ ಎಂದರು.
ಜಡೇದೇವರ ಮಠ ಪುರಾತನ, ಐತಿಹಾಸಿಕ ಹಿನ್ನೆಲೆಯುಳ್ಳದ್ದು. ಇಮ್ಮಡಿ ಬಸವರಾಜ ಸ್ವಾಮೀಜಿ ಅವರು ಶ್ರೀಮಠಕ್ಕೆ ಬಂದ ನಂತರ ಹಸಿರುವನವಾಗಿ ಪರಿವರ್ತಿಸುವ ಮೂಲಕ ಈ ಭಾಗದಲ್ಲಿ ಧಾರ್ಮಿಕ ಚಿಂತನೆ ಮೈಗೂಡಿಸಿ ಪ್ರಸಿದ್ಧಿ ಹೊಂದಿದ್ದಾರೆ. ಶ್ರೀಮಠ ದಿನೇ ದಿನೇ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ಆಷಾಢದಲ್ಲಿ ಏಕಾದಶ ಮಹಾರುದ್ರಾಭಿಷೇಕ, ಇಷ್ಟಲಿಂಗ ಮಹಾಶಿವಪೂಜೆ ನೆರವೇರಿಸುತ್ತಿರುವುದರಿಂದ ಶಾಂತಿ, ನೆಮ್ಮದಿ, ಐಕ್ಯತೆ, ಸಹಬಾಳ್ವೆಗೆ ನಾಂದಿಯಾಗಿದೆ. ಇಂತಹ ಹತ್ತಾರು ಕಾರ್ಯಕ್ರಮಗಳು ಶ್ರೀಮಠದಲ್ಲಿ ನಿರಂತರವಾಗಿ ನಡೆಯಲಿ ಎಂದರು.
ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ ಮಾತನಾಡಿ, ಲೋಕಕಲ್ಯಾಣಾರ್ಥವಾಗಿ ಸುಮಾರು ಮುನ್ನೂರು ವರ್ಷಗಳ ಕಾಲ ಜಡೇಶ್ವರರು ಅಖಂಡ ತಪಸ್ಸು ಆಚರಿಸಿದರು. ಅಂತಹ ಗುರುಗಳು ಇದ್ದ ಮಠದಲ್ಲಿ ನಾನು ಇರುವುದು ಸಂತೋಷವಾಗಿದೆ. ಲೋಕಕಲ್ಯಾಣಾರ್ಥ ಪ್ರತಿ ವರ್ಷದಂತೆ ಈ ಬಾರಿಯೂ ಏಕಾದಶ ರುದ್ರಾಭಿಷೇಕ, ಮುತ್ತಿನ ಪಲ್ಲಕಿ ಉತ್ಸವ ನಡೆಸಲಾಗಿದೆ ಎಂದರು.
ಗುಮ್ಮಸಂದ್ರ ರುದ್ರಮುನೇಶ್ವರ ಮಠದ ಡಾ.ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಆಚರಣೆಗಳಿಂದ ನೆಮ್ಮದಿ ಪಡೆಯಲು ಸಾಧ್ಯ. ಮಠ ಮಾನ್ಯಗಳು ನಾಡಿನ ಸಂಸತಿ, ಸಂಸ್ಕಾರವನ್ನು ಉಳಿಸುವ ಕೆಲಸ ಮಾಡುತ್ತಿವೆ ಎಂದರು.
ಮುತ್ತಿನ ಪಲ್ಲಕ್ಕಿ ಉತ್ಸವ: ಶನಿವಾರ ಸಂಜೆ ಪಟ್ಟಣದ ಅರಳೇಪೇಟೆ ಶ್ರೀ ಬಸವೇಶ್ವರಸ್ವಾಮಿ ದೇವಾಲಯದಿಂದ ಮಾಗಡಿ ಪಟ್ಟಣದ ರಾಜಬೀದಿಗಳಲ್ಲಿ ಮುತ್ತಿನ ಪಲ್ಲಕಿಯಲ್ಲಿ ಶ್ರೀ ಜಡೇಶ್ವರ ಸ್ವಾಮಿಯನ್ನು ಸಾಂಸತಿಕ ಕಲಾತಂಡಗಳೊಂದಿಗೆ ಉತ್ಸವ ನಡೆಸಲಾಯಿತು.
ಚಕ್ರಭಾವಿ ಜಂಗಮ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ, ಅಂಕನಹಳ್ಳಿ ಗವಿಮಠದ ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ದೊಡ್ಡಬಳ್ಳಾಪುರ ಬಸವದೇವರ ಮಠದ ಶ್ರೀ ನಿಶ್ಚಲಾ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ರಾಮೇನಹಳ್ಳಿ ಮಠದ ಶ್ರೀ ಶಿವಪಂಚಾಕ್ಷರಿ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಚಿಕ್ಕತಿಪ್ಪೂರು ಮಠ, ಕೆರೆ ಹಟ್ಟಿ ಸ್ವಾಮೀಜಿ, ವೀರಶೈವ ಮಂಡಳಿಯ ಆನಂದಪ್ಪ, ಪ್ರಕಾಶಪ್ಪ, ರುದ್ರಮೂರ್ತಿ, ಪುರಸಭೆ ಸದಸ್ಯರಾದ ಶಿವರುದ್ರಮ್ಮ, ಪೊಲೀಸ್ ವಿಜಯ್ ಕುಮಾರ್, ರೇಖಾ ನವೀನ್, ಅನಿಲ್, ಎಸ್ಸಿಬಿಎಸ್ ಮಂಜುನಾಥ್, ರಾಜ್ಯ ಕಟ್ಟಡ ಮತ್ತು ಆಸಂಟಿತ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಪ್ರಸನ್ನಗೌಡ, ಜಿಲ್ಲಾಧ್ಯಕ್ಷ ಆನಂದ್, ಅನಿಲ್ ಇತರರು ಇದ್ದರು.