ಇಷ್ಟಲಿಂಗ ಪೂಜೆಯಿಂದ ನೆಮ್ಮದಿ ಪ್ರಾಪ್ತಿ: ಮಳಲಿ ಶ್ರೀ

5sgr3
ಸಾಗರದಲ್ಲಿ ವೀರಶೈವ ಯುವ ವೇದಿಕೆ ಹಮ್ಮಿಕೊಂಡಿದ್ದ ಸಾಮೂಹಿಕ ರುದ್ರಾಭಿಷೇಕ ಮತ್ತು ಧರ್ಮಸಭೆಯನ್ನು ಡಾ. ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಡಾ. ಬಿ.ವಿ.ವೀರಭದ್ರಪ್ಪ, ವಿರೂಪಾಕ್ಷ, ಶಿವಕುಮಾರ್ ಪಾಟೀಲ್, ಶೇಖರಪ್ಪ ಗೌಡ, ಜಿ.ಎಸ್.ಹಿರೇಮಠ, ಮಧುಮಾಲತಿ ಇತರರಿದ್ದರು.
Published on

ಸಾಗರ: ವೀರಶೈವ ಸಮಾಜ ಸರ್ವರಿಗೂ ಸನ್ಮಂಗಳ ಬಯಸುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದೆ. ವೀರಶೈವ ಸಮಾಜದವರು ಕಾಯಕದ ಮೂಲಕವೇ ಶ್ರೇಷ್ಠತೆ ಕಂಡುಕೊಂಡವರು ಎಂದು ಮಳಲಿ ಮಠದ ಡಾ. ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ವೀರಶೈವ ಯುವ ವೇದಿಕೆ ಹಮ್ಮಿಕೊಂಡಿದ್ದ 16ನೇ ವರ್ಷದ ಸಾಮೂಹಿಕ ರುದ್ರಾಭಿಷೇಕ ಮತ್ತು ಧರ್ಮಸಭೆ ಉದ್ಘಾಟಿಸಿದ ಶ್ರೀಗಳು, ಗಳಿಸಿದ ಸಂಪತ್ತನ್ನು ಸದ್ವಿನಿಯೋಗ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಇಷ್ಟಲಿಂಗ ಪೂಜೆ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಶ್ರಾವಣ ಮಾಸ ವೀರಶೈವ ಸಮುದಾಯಕ್ಕೆ ಅತ್ಯಂತ ಪುಣ್ಯಕಾಲ. ಈ ಮಾಸದಲ್ಲಿ ದಾನ-ಧರ್ಮ ಮಾಡುವುದರಿಂದ ನಮ್ಮ ಪಾಪಗಳನ್ನು ಕಳೆದುಕೊಳ್ಳಬಹುದು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಬಿ.ವಿ.ವೀರಭದ್ರಪ್ಪ, ಗುರುವಿನ ಮೂಲಕ ಮಾಡುವ ಎಲ್ಲ ಕಾರ್ಯಗಳು ಯಶಸ್ಸಿನ ಮಾರ್ಗವನ್ನು ತಲುಪುತ್ತವೆ. ನಮ್ಮ ಸಮಾಜದಲ್ಲಿ ಪ್ರತಿಭಾವಂತರಿದ್ದಾರೆ. ಅವರನ್ನು ಪ್ರೋತ್ಸಾಹಿಸುವುದರಿಂದ ಸಮಾಜಕ್ಕೆ ಆಸ್ತಿಯಾಗುತ್ತಾರೆ. ಎಲ್ಲ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿ ಎಲೆಮರೆಯ ಕಾಯಿಯಂತೆ ಇರುವ ವೀರಶೈವರ ಸಾಧನೆ ಅನುಕರಣೀಯ. ಇಂತಹ ಧರ್ಮಸಭೆಯಲ್ಲಿ ಅವರನ್ನು ಗೌರವಿಸುವುದು, ಪ್ರತಿಭಾವಂತ ಮಕ್ಕಳನ್ನು ಅಭಿನಂದಿಸುವುದು ಇತರರಿಗೆ ಪ್ರೇರಣೆ ಎಂದು ಅಭಿಪ್ರಾಯಪಟ್ಟರು.
ವೇದಿಕೆ ಅಧ್ಯಕ್ಷ ವಿರೂಪಾಕ್ಷ, ಶಿವಕುಮಾರ್ ವಿ. ಪಾಟೀಲ್, ಶೇಖರಪ್ಪ ಗೌಡ, ಜಿ.ಎಸ್.ಹಿರೇಮಠ, ಎಸ್.ಸಿ.ಗಂಗಾಧರ ಗೌಡ, ಕಾವ್ಯಾ ಪ್ರಸಾದ್, ಮಧುಮಾಲತಿ ಇತರರಿದ್ದರು. ಅನ್ನಪೂರ್ಣೇಶ್ವರಿ ಭಜನಾ ಮಂಡಳಿ ಸದಸ್ಯರು ಪ್ರಾರ್ಥಿಸಿದರು. ಅನಿಲಕುಮಾರ್ ಬರದವಳ್ಳಿ ಸ್ವಾಗತಿಸಿದರು. ಚಂದ್ರಶೇಖರ್ ವಂದಿಸಿದರು. ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು.

ನೀವು ಮಾಡುವ ಒಳ್ಳೆಯ ಕೆಲಸ ನಿಮ್ಮ ತಂದೆ-ತಾಯಿಗೆ ಸಲ್ಲುತ್ತದೆ. ವಯಸ್ಸಾದ ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ. ಸಮಾಜದಲ್ಲಿ ಒಗ್ಗಟ್ಟು ಇದ್ದಾಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ. ನಮ್ಮ ಸಾಂಪ್ರದಾಯಿಕ ಆಚರಣೆ, ಆರಾಧನೆಗಳನ್ನು ನಾವು ಅನುಸರಿಸಿ ಯುವ ಪೀಳಿಗೆಗೆ ಅದನ್ನು ತಲುಪಿಸುವ ಕೆಲಸ ಮಾಡಬೇಕು.ಡಾ. ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net